ADVERTISEMENT

ಶಿವಕುಮಾರ ಶ್ರೀ ಗದ್ದುಗೆಯಲ್ಲಿ ಶಿವಲಿಂಗ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 12:59 IST
Last Updated 11 ನವೆಂಬರ್ 2019, 12:59 IST
ಶಿವಲಿಂಗು ಪ್ರತಿಷ್ಠಾಪಿಸಿ ಧಾರ್ಮಿಕ ವಿಧಿ ವಿಧಾನ ‍ಪೂರೈಸುತ್ತಿರುವ ಸಿದ್ದಲಿಂಗ ಸ್ವಾಮೀಜಿ. ನಾಡಿನ ವಿವಿಧ ಮಠಾಧೀಶರು
ಶಿವಲಿಂಗು ಪ್ರತಿಷ್ಠಾಪಿಸಿ ಧಾರ್ಮಿಕ ವಿಧಿ ವಿಧಾನ ‍ಪೂರೈಸುತ್ತಿರುವ ಸಿದ್ದಲಿಂಗ ಸ್ವಾಮೀಜಿ. ನಾಡಿನ ವಿವಿಧ ಮಠಾಧೀಶರು   

ತುಮಕೂರು: ಸಿದ್ಧ‌ಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾ ಸಮಾಧಿ ಗದ್ದುಗೆಯ ಮೇಲೆ ಸೋಮವಾರ ಶಿವಲಿಂಗ ಪ್ರತಿಷ್ಠಾಪಿಸಲಾಯಿತು.

ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಗಳ ಗದ್ದುಗೆಯ ಪೀಠದ ಮೇಲೆ 27 ಇಂಚು ಉದ್ದದ ಶಿವಲಿಂಗವನ್ನು ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಪ್ರತಿಷ್ಠಾಪಿಸಲಾಯಿತು.

ಸಿದ್ದಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿಧಿ ವಿಧಾನಗಳು ನೆರೆವೇರಿದವು.

ADVERTISEMENT

ಶಿವಲಿಂಗವನ್ನು ಶ್ರೀಗಳು ತಂಗುತ್ತಿದ್ದ ಹಳೇ ಮಠದಲ್ಲಿ ಮಂಡಲದ 48 ದಿನಗಳ ಕಾಲ ಜಲಾಧಿವಾಸ, ಧಾನ್ಯಾಧಿವಾಸ, ಪುಷ್ಪಾಧಿವಾಸ ಹಾಗೂ ಶಯನಾಧಿವಾಸದ ವಿಧಿ-ವಿಧಾನ ಪೂರೈಸಲಾಗಿತ್ತು.

ಹೀಗೆ ಸಕಲ ವಿಧಿ ವಿಧಾನವನ್ನು ಪೂರೈಸಿ ದೈವೀಶಕ್ತಿಯನ್ನು ಪಡೆದ ಪವಿತ್ರ ಲಿಂಗವನ್ನು ಶ್ರೀಗಳ ಗದ್ದುಗೆಯ ಪೀಠದ ಮೇಲೆ ಇರಿಸಲಾಗಿದೆ.

ಶಿವಲಿಂಗ ಪ್ರತಿಷ್ಠಾಪನೆಯ ವಿಧಿ ವಿಧಾನ ಪೂರ್ಣಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ‘ಗುರುಗಳ ಅಪೇಕ್ಷೆಯಂತೆ ಮತ್ತು ಭಕ್ತರ ಒತ್ತಾಸೆಯಂತೆ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಶ್ರೀಗಳು ಅವರ ಗುರುಗಳ ಗದ್ದುಗೆಯ ಮೇಲೆ ಯಾವ ರೀತಿ ಇದೆಯೋ ಅದೇ ರೀತಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುವಂತೆ ತಮಗೆ ಆದೇಶಿಸಿದ್ದರು. ಅದರಂತೆ ಇಂದು ಆ ಕಾರ್ಯ ನೆರವೇರಿಸಲಾಗಿದೆ’ ಎಂದು ಹೇಳಿದರು.

ಭಾರತೀಯ ಪರಂಪರೆಯನ್ನು ಯಾವುದೇ ಗದ್ದುಗೆಯ ಮೇಲೆ ಶಿವಲಿಂಗ ಇಡುವ ಪರಂಪರೆ ನಡೆದುಕೊಂಡು ಬಂದಿದೆ ಎಂದು ಅವರು ಹೇಳಿದರು.

ಸಂಸದ ಜಿ.ಎಸ್. ಬಸವರಾಜು, ಶ್ರೀಗಳ ಗದ್ದುಗೆಗೆ ಶಾಸ್ತ್ರೋಕ್ತವಾಗಿ ಮಂತ್ರ ಪಠಣ ಮಾಡಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಅತ್ಯಂತ ಮಹತ್ವದ ಶಕ್ತಿ ಪೀಠ ಇದಾಗಿದೆ ಎಂದರು.

ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿದಂತೆ ವಿವಿಧೆಡೆ ಭಕ್ತ ಸಮೂಹ ಹರಿದು ಬಂದಿತ್ತು.

ರಾತ್ರಿಯೇ ಮಠಕ್ಕೆ ಬಂದು ತಂಗಿದ್ದ ಭಕ್ತರು ಪ್ರತಿಯೊಂದು ಪೂಜಾ ವಿಧಿ ವಿಧಾನವನ್ನು ಕಣ್ತುಂಬಿಕೊಂಡರು. ವಿವಿಧ ಮಠಾಧೀಶರು, ಶಾಸಕ ಜ್ಯೋತಿಗಣೇಶ್ ಪಾಲ್ಗೊಂಡಿದ್ದರು.

ಮಲ್ಲಿಕಾರ್ಜುನ ಕೆಂಕೆರೆ ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.