ADVERTISEMENT

ನನ್ನದು ಸ್ನೇಹದ ರಾಜಕಾರಣ, ಕುಮಾರಸ್ವಾಮಿಯದ್ದು ದ್ವೇಷದ ರಾಜಕಾರಣ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 13:09 IST
Last Updated 21 ಏಪ್ರಿಲ್ 2022, 13:09 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ತುಮಕೂರು: ‘ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ನಾನು ಏನಿದ್ದರೂ ಸ್ನೇಹದ ರಾಜಕಾರಣ ಮಾಡುವುದು. ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಿರುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೆ.ಸಿ.ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ‘ನನ್ನನ್ನು ಬಂಧಿಸಲು ಸಿದ್ದರಾಮಯ್ಯ ಪ್ರಯತ್ನಿಸಿದ್ದರು’ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಕುಮಾರಸ್ವಾಮಿಯನ್ನು ಕಂಡರೆ ಭಯ’ ಹೇಳಿಕೆಗೆ ಏಕ ವಚನದಲ್ಲೇ ತರಾಟೆಗೆ ತೆಗೆದುಕೊಂಡರು. ‘ನಾನು ರಾಜಕೀಯಕ್ಕೆ ಬಂದಾಗ ಇವನ್ಯಾರು ಎಂಬುದೇ ಗೊತ್ತಿರಲಿಲ್ಲ. 1978ರಲ್ಲಿ ರಾಜಕೀಯಕ್ಕೆ ಬಂದೆ. ಆಗ ಇವನು ಎಲ್ಲಿದ್ದ. 1983ರಲ್ಲಿ ನಾನು ಶಾಸಕನಾಗಿದ್ದಾಗ ಕುಮಾರಸ್ವಾಮಿ ರಾಜಕೀಯದಲ್ಲಿ ಇರಲೇ ಇಲ್ಲ. ನನ್ನ ಬಗ್ಗೆ ಮಾತನಾಡಲು ಏನಿದೆ’ ಎಂದು ಪ್ರಶ್ನಿಸಿದರು.

ADVERTISEMENT

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಿಎಸ್‌ಐ ನೇಮಕಾತಿಗೆ ನಡೆದ ಅಕ್ರಮದಲ್ಲಿ ಭಾಗಿಯಾಗಿರುವ ಕಿಂಗ್‌ಪಿನ್ ದಿವ್ಯಾ ಹಾಗೂ ಅವರ ಗಂಡ ಬಿಜೆಪಿಯವರು. ಹಾಗಾಗಿ ಬಿಜೆಪಿ ನಾಯಕರು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.