ತುಮಕೂರು: ಬುದ್ಧ ಹಾಗೂ ವಚನಕಾರರ ವಿಚಾರಧಾರೆಗಳಲ್ಲಿ ಸಾಮ್ಯತೆ ಕಾಣಬಹುದಾಗಿದೆ ಎಂದು ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಗರದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆ.ಬಿ.ಸಿದ್ದಯ್ಯ ಹಾಗೂ ವೀಚಿ ಅವರು ಕನ್ನಡಕ್ಕೆ ಅನುವಾದಿಸಿರುವ ಸಖೀಗೀತ ಪ್ರಕಾಶನ ಹೊರತಂದಿರುವ ‘ನಾಲ್ಕು ಶ್ರೇಷ್ಠ ಸತ್ಯಗಳು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಬುದ್ಧ 2,500 ವರ್ಷಗಳ ಹಿಂದೆಯೇ ಹೇಳಿದ್ದನ್ನು ವಚನಕಾರರು ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ’ ಎಂಬ ವಚನದ ಮೂಲಕ ತಿಳಿಸಿಕೊಟ್ಟಿದ್ದಾರೆ. ವಚನಕಾರರ ಮೇಲೆ ಬುದ್ಧನ ಪ್ರಭಾವ ಇರುವುದನ್ನು ಕಾಣಬಹುದಾಗಿದೆ. ಜಗತ್ತಿನಲ್ಲಿ ಬುದ್ಧನಷ್ಟು ಪ್ರಜಾಪ್ರಭುತ್ವವಾದಿ ಮತ್ತೊಬ್ಬರಿಲ್ಲ. ತನ್ನ ತಪ್ಪನ್ನು ಒಪ್ಪಿಕೊಳ್ಳುವ ಗುಣವಿತ್ತು. ಒಳ್ಳೆಯದನ್ನು ಯಾರೇ ಹೇಳಿದರೂ ಅದನ್ನು ಸ್ವೀಕರಿಸುತ್ತಿದ್ದ ಎಂದರು.
22ನೇ ಶತಮಾನದಲ್ಲಿ ಜನರು ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂಬುದನ್ನು ಸರಿಯಾಗಿ ಅರ್ಥೈಸಲಾಗದೆ ಮಾನಸಿಕ ತೊಳಲಾಟಕ್ಕೆ ಸಿಲುಕಿದ್ದಾರೆ. ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳದೇ, ಇತರರನ್ನು ಅರ್ಥೈಸಲು ಹೋಗುತ್ತಿರುವುದರಿಂದ ಇಂತಹ ಸಮಸ್ಯೆ ಎದುರಿಸುತ್ತಿದ್ದೇವೆ. ಸಾವು, ನೋವು, ದುಃಖವನ್ನು ಎದುರಿಸಲಾರದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳಿದರು.
ಲೇಖಕ ತುಂಬಾಡಿ ರಾಮಯ್ಯ, ‘ಕೆ.ಬಿ.ಸಿದ್ದಯ್ಯ, ವೀಚಿ ಅನುವಾದಿಸಿರುವ ಕೃತಿಯನ್ನು 31 ವರ್ಷಗಳ ಹಿಂದೆ ನಗರದಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಮರು ಮುದ್ರಣಗೊಂಡು ಬುದ್ಧ ಪೂರ್ಣಿಮೆಯ ದಿನ ಬಿಡುಗಡೆಯಾಗುತ್ತಿದೆ. ಅಂದು ಪುಸ್ತಕ ಮುದ್ರಣಕ್ಕೆ ಜಿ.ವಿ.ಆನಂದಮೂರ್ತಿ ಜೊತೆ ಓಡಾಡಿದ್ದೆ. ಇಂದು ಸಮಾರಂಭದ ಅಧ್ಯಕ್ಷತೆ ವಹಿಸಿರುವುದು ಸಂತಸ ತಂದಿದೆ’ ಎಂದು ನೆನಪಿಸಿಕೊಂಡರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಬಾಲಗುರುಮೂರ್ತಿ, ‘ಹುಟ್ಟಿದ ದಿನದಿಂದಲೇ ಸಾವು ಖಚಿತ ಎಂಬ ಸತ್ಯವನ್ನು ಅರ್ಥೈಸಿಕೊಳ್ಳುವುದನ್ನು ನಾವು ಕಲಿತುಕೊಳ್ಳಬೇಕಿದೆ. ಆಗ ಮಾತ್ರ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.
ಪಿ.ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ, ಟಿ.ಸಿ.ವಿಸ್ಮಯ ಚಿಕ್ಕವೀರಯ್ಯ, ನವೀನ್ ಪೂಜಾರಹಳ್ಳಿ, ನರಸಿಂಹಮೂರ್ತಿ ಹಳೆಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.