ADVERTISEMENT

ಶಿರಾ ಉಪಚುನಾವಣೆ: ಹೊರಗಿದ್ದುಕೊಂಡೇ ಕಾರ್ಯಾಚರಣೆ

ಶಿರಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ರಾಜಕೀಯ ಮುಖಂಡರ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 2:39 IST
Last Updated 3 ನವೆಂಬರ್ 2020, 2:39 IST

ತುಮಕೂರು: ಶಿರಾ ಉಪಚುನಾವಣೆ ಪ್ರಚಾರಕ್ಕೆ ಬಂದಿದ್ದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಭಾನುವಾರ ಸಂಜೆಯೇ ಕ್ಷೇತ್ರ ಬಿಟ್ಟು ಹೊರಗೆ ಹೋಗಿದ್ದಾರೆ. ಆದರೆ, ಕ್ಷೇತ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ಇದ್ದುಕೊಂಡೇ ಕಾರ್ಯಾಚರಣೆಗೆ ಇಳಿದಿದ್ದಾರೆ.

ಕ್ಷೇತ್ರದ ಮತದಾರರು ಅಲ್ಲದವರು ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ನಿಯಮದಂತೆ ಹೊರಗೆ ಹೋಗಬೇಕು. ಅದರಂತೆ ಮೂರು ಪಕ್ಷಗಳ ನಾಯಕರು ಕ್ಷೇತ್ರದಿಂದ ದೂರ ಉಳಿದಿದ್ದು, ಶಿರಾಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿವಾಸ್ತವ್ಯ ಹೂಡಿ ತಂತ್ರಗಾರಿಕೆ ಮುಂದುವರಿಸಿದ್ದಾರೆ.

ಕಳೆದ ಒಂದು ತಿಂಗಳಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‌ಗೌಡ, ಪ್ರಚಾರ ಸಂದರ್ಭದಲ್ಲಿ ‘ತಂತ್ರಗಾರಿಕೆ’ ನಡೆಸಿದ ಮುಖ್ಯಮಂತ್ರಿ ಪುತ್ರ ಬಿ.ವೈ. ವಿಜಯೇಂದ್ರ, ಪಕ್ಷದ ಇತರ ನಾಯಕರು ಶಿರಾಗೆ ಹೊಂದಿಕೊಂಡಂತೆ ಇರುವ ಬೆಳ್ಳಾವಿ ಕ್ರಾಸ್‌ನಲ್ಲಿ ತಂಗಿದ್ದಾರೆ. ಬಿಜೆಪಿ ಮುಖಂಡರು ಇಲ್ಲಿಂದಲೇ ಎಲ್ಲಾ ರೀತಿಯ ಕಾರ್ಯಾಚರಣೆ
ನಡೆಸುತ್ತಿದೆ.

ADVERTISEMENT

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮಧುಗಿರಿ ಶಾಸಕ ಎಂ.ವಿ. ವೀರಭದ್ರಯ್ಯ ಅವರ ಕೈಮರದಲ್ಲಿ ಇರುವ ಮನೆಯಲ್ಲಿ ಭಾನುವಾರ ರಾತ್ರಿ ತಂಗಿದ್ದರು. ಸೋಮವಾರ ಮಧ್ಯಾಹ್ನದವರೆಗೂ ಇದ್ದು, ಎಲ್ಲಾ ಉಸ್ತುವಾರಿಯನ್ನು ನೋಡಿಕೊಂಡು ಬೆಂಗಳೂರಿಗೆ ಹೋಗಿದ್ದಾರೆ. ಶಿರಾದ ಕೆಲ ಹೋಬಳಿಗಳ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಜ್ವಲ್ ರೇವಣ್ಣ, ಹಿರಿಯೂರು ಬಳಿ ವಾಸ್ತವ ಮಾಡಿದ್ದು, ಅಲ್ಲಿಂದಲೇ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಉಳಿದ ನಾಯಕರು ತಮ್ಮ ಊರುಗಳಿಗೆ ಮರಳಿದ್ದಾರೆ.

ಕಾಂಗ್ರೆಸ್‌ನ ಯಾವ ನಾಯಕರೂ ಶಿರಾ ಸುತ್ತಮುತ್ತ ನೆಲೆಸಿಲ್ಲ. ಕೆಲವರು ತುಮಕೂರಿನಲ್ಲಿ ಇದ್ದುಕೊಂಡು ನೋಡಿಕೊಳ್ಳುತ್ತಿದ್ದಾರೆ. ಪ್ರಚಾರ ಅಂತ್ಯಗೊಂಡ ನಂತರ ಬಹುತೇಕ ಜವಾಬ್ದಾರಿಯನ್ನು ಅಭ್ಯರ್ಥಿ ಟಿ.ಬಿ. ಜಯಚಂದ್ರ ಹೆಗಲಿಗೆ ಹಾಕಿ ಕೈತೊಳೆದುಕೊಂಡಿದ್ದಾರೆ. ಹೆಚ್ಚಿನ ಹೊಣೆಯನ್ನು ಅಭ್ಯರ್ಥಿಯೇ ಹೊತ್ತುಕೊಂಡು ಸುತ್ತಾಡುತ್ತಿದ್ದಾರೆ. ಇತರೆ ಪಕ್ಷಗಳಂತೆ ರಾಜ್ಯಮಟ್ಟದ ನಾಯಕರು ಯಾವುದೇ ಹೊಣೆಗಾರಿಕೆ ತೆಗೆದುಕೊಳ್ಳದಿರುವುದು ಅವರಲ್ಲಿ ಬೇಸರ ತರಿಸಿದೆ ಎಂದು ಹೇಳಲಾಗುತ್ತಿದೆ.

ಮೂರು ಪಕ್ಷಗಳ ಹತ್ತಾರು ನಾಯಕರು, ಜಾತಿ, ಜನಾಂಗದ ಮುಖಂಡರು ತಮ್ಮ ಸಮುದಾಯ ಹೆಚ್ಚಾಗಿರುವ ಪ್ರದೇಶಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದರು. ಹೊರಗಿನಿಂದ ಬಂದವರು ಕ್ಷೇತ್ರ ಬಿಟ್ಟಿದ್ದಾರೆ. ಆದರೆ ಕಾರ್ಯತಂತ್ರ ಮಾತ್ರ ನಿಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.