ADVERTISEMENT

ಶೀಘ್ರದಲ್ಲಿ ಶಿರಾ ಗ್ರೇಡ್ 1 ನಗರಸಭೆ: ಶಾಸಕ ಟಿ.ಬಿ‌.ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 14:27 IST
Last Updated 24 ಮಾರ್ಚ್ 2025, 14:27 IST
ಟಿ.ಬಿ. ಜಯಚಂದ್ರ
ಟಿ.ಬಿ. ಜಯಚಂದ್ರ   

ಶಿರಾ: ‘ಶಿರಾ ಯೋಜನಾ ಪ್ರಾಧಿಕಾರವನ್ನು ಮೇಲ್ದರ್ಜೆಗೇರಿಸಿ ಶಿರಾ ನಗರಾಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಿದ ರೀತಿಯಲ್ಲಿಯೇ ಶೀಘ್ರದಲ್ಲಿ ಶಿರಾ ನಗರಸಭೆಯನ್ನು ಗ್ರೇಡ್ 1 ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗುವುದು’ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬೆಂಗಳೂರಿನ ಜನಸಂಖ್ಯೆ 2050ರ ವೇಳೆಗೆ 4ಕೋಟಿ ಆಗುವುದಾಗಿ ವರದಿ ನೀಡಲಾಗಿದೆ. ಇದರ ಪರಿಣಾಮ ಶಿರಾ ಸಹ ಬೆಂಗಳೂರಿನ ಭಾಗವಾಗುವ ದಿನಗಳು ದೂರವಿಲ್ಲ. ಶಿರಾವನ್ನು ಅಭಿವೃದ್ಧಿಯ ಕಡೆ ತೆಗೆದುಕೊಂಡು ಹೋಗಲು ಎಲ್ಲಾ ಪ್ರಯತ್ನ ನಡೆಸಲಾಗಿದೆ’ ಎಂದರು.

‘ಉತ್ತರ ಕರ್ನಾಟಕದ‌ ಭಾಗದಿಂದ ಬೆಂಗಳೂರಿಗೆ ಬರುವ ಜನರಿಗೆ ಶಿರಾ ಹೆಬ್ಬಾಗಿಲು ಆಗಿರುವುದರಿಂದ ಶಿರಾ ತಾಲ್ಲೂಕಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಿಸುವಂತೆ ಉತ್ತರ ಕರ್ನಾಟಕದ ಶಾಸಕರ ಜೊತೆ ಸೇರಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ADVERTISEMENT

‘ಶಿರಾ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು. ಭೂಮಿಯ ಬೆಲೆ ಗಗನಕ್ಕೆ ಏರಿದ ನಂತರ ರಿಯಲ್ ಎಸ್ಟೇಟ್ ಮಾಫಿಯಾದವರು ಜನತೆಗೆ ವಂಚಿಸುವ ಕೆಲಸ ಮಾಡುತ್ತಿದ್ದಾರೆ.‌ ತಾಲ್ಲೂಕಿನಲ್ಲಿ 1,730 ಎಕರೆ ಜಮೀನಿನ ಬೋಗಸ್ ದಾಖಲೆ ಸೃಷ್ಟಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಭೂಗಳ್ಳರನ್ನು ಜೈಲಿಗೆ ಕಳುಹಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.