ADVERTISEMENT

ಸ್ಮಾರ್ಟ್‌ಸಿಟಿ ಕಾಮಗಾರಿ ಅನುಷ್ಠಾನ: ಮೌಲ್ಯಮಾಪನ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 12:50 IST
Last Updated 30 ನವೆಂಬರ್ 2019, 12:50 IST

ತುಮಕೂರು: ತುಮಕೂರು ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸ್ವತಂತ್ರ ಅನುಷ್ಠಾನ ಮೌಲ್ಯಮಾಪನ ಹಾಗೂ ಯೋಜನಾ ತಂಡ ರಚಿಸಲಾಗಿದೆ.

ಕಾಮಗಾರಿಗಳನ್ನು ಪಿಎಂಸಿ ಸಂಸ್ಥೆ ಹಾಗೂ ಸ್ಮಾರ್ಟ್‌ಸಿಟಿ ಲಿಮಿಟೆಡ್‍ ಎಂಜಿನಿಯರ್‌ ತಂಡಗಳು ಸಮರ್ಪಕವಾಗಿ ನಿರ್ವಹಿಸದೆ ಇರುವುದರಿಂದ ಜನರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಅದೇ ರೀತಿ ಕಾಮಗಾರಿ ಗುಣಮಟ್ಟದ ಬಗ್ಗೆ ಜನಪ್ರತಿನಿಧಿಗಳಿಂದ ಆರೋಪಗಳು ವ್ಯಕ್ತವಾಗುತ್ತಿದೆ. ಈ ಕಾರಣದಿಂದ ಈ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸ್ಮಾರ್ಟ್‌ಸಿಟಿ ಲಿಮಿಟೆಡ್ ಅಧ್ಯಕ್ಷೆ ಶಾಲಿನಿ ರಜನೀಶ್ ತಿಳಿಸಿದ್ದಾರೆ.

ತಂಡದ ಅಧ್ಯಕ್ಷರಾಗಿ ಬೆಂಗಳೂರಿನ ಕಾವೇರಿ ನೀರಾವರಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್, ಸದಸ್ಯರಾಗಿ ಕಾವೇರಿ ನೀರಾವರಿ ನಿಗಮದ ತಾಂತ್ರಿಕ ನಿರ್ದೇಶಕ ಎಂ.ರವೀಂದ್ರಪ್ಪ, ತುಮಕೂರಿನ ನಿವೃತ್ತ ಮುಖ್ಯ ಎಂಜಿನಿಯರ್ ಡಿ.ಎಸ್.ಹರೀಶ ಹಾಗೂ ತುಮಕೂರಿನ ಭದ್ರಾ ಮೇಲ್ದಂಡೆ ಯೋಜನೆಯ ಉಪಮುಖ್ಯ ಎಂಜಿನಿಯರ್ ಎಚ್.ಬಿ.ಮಲ್ಲೇಶ್ ಅವರನ್ನು ನೇಮಿಸಲಾಗಿದೆ.

ADVERTISEMENT

ಈ ತಂಡವು ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ತಾಂತ್ರಿಕ ವಿವರಗಳನ್ನು ಪಡೆದು ಅದರ ಅಗತ್ಯ ಹಾಗೂ ಗುಣಮಟ್ಟದ ಬಗ್ಗೆ ವರದಿ ನೀಡಬೇಕು. ಅಲ್ಲದೆ ತಪ್ಪಿತಸ್ಥ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಪ್ರಸ್ತಾವ ಸಲ್ಲಿಸಬೇಕು.

ಡಿ.16ರಂದು ನಡೆಯಲಿರುವ ಸಭೆಯಲ್ಲಿ ಅಮಾನಿಕೆರೆ ಕಾಮಗಾರಿ, ಸ್ಮಾರ್ಟ್ ರಸ್ತೆ ಕಾಮಗಾರಿಗಳ ಬಗ್ಗೆ ತಂಡದ ಸದಸ್ಯರು ಸಂಪೂರ್ಣ ವರದಿಯನ್ನು ಅಧ್ಯಕ್ಷ ಜೈಪ್ರಕಾಶ್ ಅವರಿಗೆ ನೀಡಬೇಕು ಎಂದು ಶಾಲಿನಿ ರಜನೀಶ್ ‘ಪ್ರಕಟಣೆ’ಯಲ್ಲಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.