ADVERTISEMENT

ತುಮಕೂರು: ಪೊದೆಯಲ್ಲಿ ಮರೆಯಾದ ‘ಥೀಮ್‌ ಪಾರ್ಕ್‌’

₹40 ಲಕ್ಷ ವೆಚ್ಚದಲ್ಲಿ ಪಾರ್ಕ್‌ ಅಭಿವೃದ್ಧಿ, ಸೊಳ್ಳೆ, ಹೆಗ್ಗಣ ಕಾಟ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 6:58 IST
Last Updated 18 ಸೆಪ್ಟೆಂಬರ್ 2024, 6:58 IST
ತುಮಕೂರು ಅಮಾನಿಕೆರೆಯ ಸೈನ್ಸ್‌ ಥೀಮ್‌ ಪಾರ್ಕ್‌ನಲ್ಲಿ ಗಿಡಗಳ ಮಧ್ಯೆ ಮರೆಯಾದ ಕಲಾಕೃತಿ
ತುಮಕೂರು ಅಮಾನಿಕೆರೆಯ ಸೈನ್ಸ್‌ ಥೀಮ್‌ ಪಾರ್ಕ್‌ನಲ್ಲಿ ಗಿಡಗಳ ಮಧ್ಯೆ ಮರೆಯಾದ ಕಲಾಕೃತಿ   

ತುಮಕೂರು: ಅಮಾನಿಕೆರೆ ಆವರಣದಲ್ಲಿ ಸ್ಮಾರ್ಟ್‌ ಸಿಟಿಯಿಂದ ₹40 ಲ‌ಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದ ‘ಸೈನ್ಸ್‌ ಥೀಮ್‌ ಪಾರ್ಕ್‌’ ನಿರ್ವಹಣೆ ಇಲ್ಲದೆ ಹಳ್ಳ ಹಿಡಿದಿದೆ.

ಕೆರೆಗೆ ಭೇಟಿ ನೀಡುವ ಮಕ್ಕಳು, ಪೋಷಕರಿಗೆ ವಿಜ್ಞಾನದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ‘ಥೀಮ್‌ ಪಾರ್ಕ್‌’ ನಿರ್ಮಿಸಲಾಗಿತ್ತು. 2019ರಲ್ಲಿ ಪಾರ್ಕ್‌ ನಿರ್ಮಾಣದ ಕಾಮಗಾರಿ ಆರಂಭವಾಗಿ 2022ಕ್ಕೆ ಪೂರ್ಣಗೊಂಡಿತ್ತು. ವಿಜ್ಞಾನದ ಬಗ್ಗೆ ಪ್ರಾಯೋಗಿಕವಾಗಿ ತಿಳಿಸುವ ನಿಟ್ಟಿನಲ್ಲಿ ಆಮೆ, ಮೊಸಳೆ, ಹುಲಿ ಸೇರಿದಂತೆ ಇತರೆ ಪ್ರಾಣಿಗಳ ಕಲಾಕೃತಿ, ಪಠ್ಯಕ್ಕೆ ಅನುಕೂಲ ಆಗುವ ವಿವಿಧ ಬಗೆಯ ಮಾದರಿಗಳ ಪ್ರಾತ್ಯಕ್ಷಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಥೀಮ್‌ ಪಾರ್ಕ್‌ ಎರಡೇ ವರ್ಷದಲ್ಲಿ ವೀಕ್ಷಿಸಲು ಆಗದಷ್ಟು ಹಾಳಾಗಿದೆ. ನಿರ್ವಹಣೆ ಇಲ್ಲದೆ ಪಾರ್ಕ್‌ ಅಧ್ವಾನವಾಗಿದೆ. ಆಳೆತ್ತರಕ್ಕೆ ಬೆಳೆದಿರುವ ಗಿಡಗಳ ಮಧ್ಯೆ ಕಲಾಕೃತಿಗಳು ಮರೆಯಾಗಿವೆ. ಗಿಡ ತೆರವುಗೊಳಿಸಿ ಕಲಾಕೃತಿ ವೀಕ್ಷಣೆಗೆ ಅನುವು ಮಾಡಿಕೊಡಬೇಕಾದವರು ಪಾರ್ಕ್‌ ಉದ್ಘಾಟಿಸಿದ ನಂತರ ಇತ್ತ ಸುಳಿದಿಲ್ಲ. ಗಿಡಗಳು ರಸ್ತೆಗೆ ಹರಡಿಕೊಂಡಿದ್ದು ಸೊಳ್ಳೆ, ಹೆಗ್ಗಣಗಳ ಕಾಟ ಹೆಚ್ಚಾಗಿದೆ.

ADVERTISEMENT

‘ಪ್ರಶಾಂತವಾದ ವಾತಾವರಣ ಇದೆ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಪಾರ್ಕ್‌ಗೆ ಭೇಟಿ ನೀಡಿದರೆ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಕೈ, ಕಾಲು ಊತ ಬರುತ್ತಿದೆ. ಕೆಲಸ ಮಾಡಲು ಹೆಚ್ಚಿನ ಸಿಬ್ಬಂದಿ ನೇಮಿಸಿಲ್ಲ. ಇರುವ ಐದಾರು ಜನ ಇಡೀ ಅಮಾನಿಕೆರೆ ಪಾರ್ಕ್‌ ಸ್ವಚ್ಛಗೊಳಿಸಲು ಹೇಗೆ ಸಾಧ್ಯ? ಸಾರ್ವಜನಿಕರಿಂದ ಪ್ರವೇಶ ಶುಲ್ಕ ಪಡೆಯುವ ಟೂಡಾ ಅಧಿಕಾರಿಗಳು ಇಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ’ ಎಂದು ನಗರದ ನಿಖಿಲ್ ದೂರಿದರು.

ಅಮಾನಿಕೆರೆ ನಗರದ ಪ್ರಮುಖ ಪ್ರವಾಸಿ ತಾಣವಾಗಿದೆ. ವಾರಾಂತ್ಯ ಮತ್ತು ರಜೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಥೀಮ್‌ ಪಾರ್ಕ್‌ನಲ್ಲಿ ಮಕ್ಕಳ ಆಟೋಟಕ್ಕಾಗಿ ಅಳವಡಿಸಿದ್ದ ಅಗತ್ಯ ಪರಿಕರಗಳು ಸಹ ಮುರಿದು ಮೂಲೆ ಸೇರಿವೆ. ಅವುಗಳನ್ನು ಸರಿಪಡಿಸಿ ಮತ್ತೆ ಉಪಯೋಗಕ್ಕೆ ನೀಡುವ ಕೆಲಸವಾಗಿಲ್ಲ.

‘ಥೀಮ್‌ ಪಾರ್ಕ್‌ಅನ್ನು 2022ರಲ್ಲೇ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಟೂಡಾ) ಹಸ್ತಾಂತರಿಸಲಾಗಿದೆ. ಅಮಾನಿಕೆರೆ ಸಹ ಅವರ ವ್ಯಾಪ್ತಿಗೆ ಸೇರುತ್ತದೆ, ನಿರ್ವಹಣೆಯನ್ನೂ ಅವರೇ ಮಾಡಬೇಕು’ ಎಂಬುವುದು ಯೋಜನೆ ಪೂರ್ಣಗೊಳಿಸಿದ ಸ್ಮಾರ್ಟ್‌ ಸಿಟಿ ಅಧಿಕಾರಿಗಳ ಉತ್ತರ. ‘ಪಾರ್ಕ್‌ಅನ್ನು ಇನ್ನೂ ಪ್ರಾಧಿಕಾರಕ್ಕೆ ವಹಿಸಿಕೊಟ್ಟಿಲ್ಲ. ನಮಗೆ ಹಸ್ತಾಂತರವಾಗುವ ತನಕ ಇದರ ಜವಾಬ್ದಾರಿ ಸ್ಮಾರ್ಟ್‌ ಸಿಟಿಗೆ ಸೇರುತ್ತದೆ’ ಎಂದು ಟೂಡಾ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ಪ್ರಾಧಿಕಾರ ಮತ್ತು ಸ್ಮಾರ್ಟ್‌ ಸಿಟಿ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಥೀಮ್‌ ಪಾರ್ಕ್‌ ಹಳ್ಳ ಹಿಡಿದಿದೆ.

ಬಾಗಿಲು ತೆಗೆಯದ ಮಳಿಗೆ

‘ಸೈನ್ಸ್‌ ಥೀಮ್‌ ಪಾರ್ಕ್‌’ ಬಳಿ ಎರಡು ಅಂಗಡಿ ಮಳಿಗೆ ನಿರ್ಮಿಸಿದ್ದು ಅವು ಉದ್ಘಾಟನೆಗೂ ಮುನ್ನವೇ ತುಕ್ಕು ಹಿಡಿಯುತ್ತಿವೆ. ಪಾರ್ಕ್‌ ವೀಕ್ಷಣೆಗೆ ಹೆಚ್ಚಿನ ಜನರು ಭೇಟಿ ನೀಡುತ್ತಾರೆ. ಬರುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಿದ್ದ ಮಳಿಗೆಗಳು ಇದುವರೆಗೆ ಬಾಗಿಲು ತೆರೆದಿಲ್ಲ. ಅಂದಾಜು ₹7 ಲಕ್ಷ ವೆಚ್ಚದಲ್ಲಿ 2 ಮಳಿಗೆ ನಿರ್ಮಿಸಲಾಗಿದೆ. ಇಲ್ಲಿಯ ತನಕ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ. ಇದುವರೆಗೆ ಯಾರೊಬ್ಬರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ನಿರ್ವಹಣೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಸೈನ್ಸ್‌ ಥೀಮ್‌ ಪಾರ್ಕ್‌ನಲ್ಲಿ ಹಾಳಾದ ಮಕ್ಕಳ ಕಲಿಕಾ ಪರಿಕರ
‌ಮೂಲೆ ಸೇರಿದ ಅಂಗಡಿ ಮಳಿಗೆ
ಪಾರ್ಕ್‌ನಲ್ಲಿ ಮುರಿದ ಆಟಿಕೆ ಪರಿಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.