ADVERTISEMENT

ಸಮಾಜವನ್ನು ಛಿದ್ರವಾಗಿಸುವ ನಾಟಕ ನಡೆಯುತ್ತಿದೆ: ಪರಮೇಶ್ವರ ಕಳವಳ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 7:08 IST
Last Updated 15 ನವೆಂಬರ್ 2021, 7:08 IST
ತುಮಕೂರಿನ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಶಾಸಕ ಡಾ.ಜಿ. ಪರಮೇಶ್ವರ ಉದ್ಘಾಟಿಸಿದರು
ತುಮಕೂರಿನ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಶಾಸಕ ಡಾ.ಜಿ. ಪರಮೇಶ್ವರ ಉದ್ಘಾಟಿಸಿದರು   

ತುಮಕೂರು: ‘ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚನ್ನಮ್ಮ ಅವರ ಸಾಲಿಗೆ ವೀರವನಿತೆ ಒನಕೆ ಓಬವ್ವ ಕೂಡ ಸೇರಿದ್ದು, ನಾಡಿನ ಹೆಣ್ಣು ಕುಲಕ್ಕೆ ಮಾದರಿಯಾಗಿದ್ದಾರೆ’ ಎಂದು ಶಾಸಕ ಡಾ.ಜಿ. ಪರಮೇಶ್ವರ ಅಭಿಪ್ರಾಯಪಟ್ಟರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಇತ್ತೀಚೆಗೆ ಛಲವಾದಿ ಕಲೆ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಹಾಗೂ ಕುರುಕ್ಷೇತ್ರ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ರಾಜ್ಯವನ್ನಾಳಿದವರು ಓಬವ್ವಳನ್ನು ಸ್ಮರಿಸುವ ಕೆಲಸ ಮಾಡಲಿಲ್ಲ. ಆದರೆ, ನೆಹರು ಓಲೇಕಾರ್ ಈ ವಿಚಾರವಾಗಿ ಅಧಿಕಾರಸ್ಥರ ಗಮನ ಸೆಳೆದು ನಾಡ ಹಬ್ಬವಾಗಿ ಆಚರಿಸಲು ಆದೇಶ ಮಾಡಿಸಿದ್ದಾರೆ ಎಂದು ತಿಳಿಸಿದರು.

ADVERTISEMENT

ಪ್ರಸ್ತುತ ಸಮಾಜವನ್ನು ಛಿದ್ರವಾಗಿಸುವ ನಾಟಕ ನಡೆಯುತ್ತಿದೆ. ಆದರೆ, ಛಲವಾದಿ ಮಹಾಸಭಾ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಛಲವಾದಿ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಕೆ. ಶಿವರಾಮ್, ಸರ್ಕಾರ ಓಬವ್ವ ಜಯಂತಿಯನ್ನು ನಾಡ ಹಬ್ಬವಾಗಿ ಆಚರಿಸಲು ಆದೇಶಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದೆ. ಅದೇ ರೀತಿ ಛಲವಾದಿ ಮಹಾಸಭಾದ ಉಳಿದ ಬೇಡಿಕೆಗಳಾದ ಓಬವ್ವಳ ಸಮಾಧಿಯ ಜೀರ್ಣೋದ್ಧಾರ ಹಾಗೂ ರಕ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಜನಪದ ಕಲಾವಿದೆ ಗಂಗ ಹುಚ್ಚಮ್ಮ, ಉಪನ್ಯಾಸಕಿ ಡಾ.ಕಾವಾಲಮ್ಮ, ಈಶ್ವರಿ ಮಹಿಳಾ ಸಂಘದ ಅಧ್ಯಕ್ಷೆ ಕರಿಯಮ್ಮ ಅವರಿಗೆ ‘ಒನಕೆ ಓಬವ್ವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಓಬವ್ವ ವಂಶಸ್ಥರಾದ ಎ.ಎಸ್. ಸೋಮಶೇಖರ್ ಹಾಗೂ ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ನಿರಂಜನ್ ಅವರನ್ನು ಅಭಿನಂದಿಸಲಾಯಿತು.

ಶಾಸಕ ಡಾ.ಶ್ರೀನಿವಾಸಮೂರ್ತಿ, ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣ್ ದಾಸ್ ಮಾತನಾಡಿದರು. ವೇದಿಕೆಯಲ್ಲಿ ಡಾ.ಚಂದ್ರಪ್ಪ, ಪರಮೇಶ್ವರ್, ಛಲವಾದಿ ಕಲೆ ಮತ್ತು ಸಾಂಸ್ಕೃತಿಕ ವೇದಿಕೆಯ ಎಸ್. ರಾಜಣ್ಣ, ಎನ್. ಜಗನ್ನಾಥ್, ಎಚ್.ಎಸ್. ಪರಮೇಶ್ವರ್‌, ಹುನುಮಂತರಾಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.