ADVERTISEMENT

ಕೋರ | ಮಣ್ಣು ಸಾಗಣೆ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:47 IST
Last Updated 4 ಮಾರ್ಚ್ 2026, 6:47 IST
ಕೋರ ಹೋಬಳಿ ಬತ್ಸಂದ್ರ ಗ್ರಾಮದಲ್ಲಿ ಮಣ್ಣು ಸಂಗ್ರಹಿಸಿರುವುದು
ಕೋರ ಹೋಬಳಿ ಬತ್ಸಂದ್ರ ಗ್ರಾಮದಲ್ಲಿ ಮಣ್ಣು ಸಂಗ್ರಹಿಸಿರುವುದು   

ಕೋರ (ತುಮಕೂರು): ಹೋಬಳಿಯ ಬತ್ಸಂದ್ರ ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಗೋಮಾಳದಿಂದ ಅಕ್ರಮವಾಗಿ ಮಣ್ಣು ತೆಗೆದು ಸಾಗಣೆ ಮಾಡುತ್ತಿದ್ದು, ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗೋಮಾಳದಲ್ಲಿ ಅಕ್ರಮವಾಗಿ ಜೆಸಿಬಿ ಯಂತ್ರ ಬಳಸಿ ಟಿಪ್ಪರ್, ಟ್ರ್ಯಾಕ್ಟರ್‌ಗಳ ಮೂಲಕ ರಾತ್ರೋರಾತ್ರಿ ಸಾವಿರಾರು ಟನ್‌ಗಳಷ್ಟು ಮಣ್ಣು ತೆಗೆದು ಬೇರೆಡೆ ದಾಸ್ತಾನು ಮಾಡಲಾಗುತ್ತಿದೆ. ನಂತರ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಸರ್ಕಾರಕ್ಕೆ ಸಂದಾಯವಾಗಬೇಕಿದ್ದ ತೆರಿಗೆ ಕಟ್ಟದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಗಣಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಶಾಮೀಲಾಗಿ ಅಕ್ರಮವಾಗಿ ಮಣ್ಣು ತೆಗೆದು ಮಾರಾಟ ಮಾಡಲು ನೆರವಾಗುತ್ತಿದ್ದಾರೆ. ಜಿಲ್ಲಾ ಆಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ದೂರಿದ್ದಾರೆ.

ADVERTISEMENT

ರೈತರೊಬ್ಬರು ತಮ್ಮ ಜಮೀನಿಗೆ ಮಣ್ಣು ಸಾಗಣೆ ಮಾಡಿದರೆ ಪ್ರಕರಣ ದಾಖಲಿಸಲಾಗುತ್ತಿದೆ. ಆದರೆ ದಂಧೆ ನಡೆಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಭೂ ಮಾಫಿಯಾಗೆ ಜಿಲ್ಲಾ ಆಡಳಿತ ಮಣಿದಿದೆ. ಮಣ್ಣು ಸಾಗಣೆ ತಡೆಯದಿದ್ದರೆ ಹೋರಾಟ ನಡೆಸಲಾಗುವುದು ಎಚ್ಚರಿಸಿದ್ದಾರೆ.

ಮಣ್ಣು ಮಾರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮಣ್ಣು ತೆಗೆಯದಂತೆ, ಸಂಗ್ರಹಿಸಿ ಮಾರಾಟ ಮಾಡದಂತೆ ಕ್ರಮ ವಹಿಸಬೇಕು. ಈಗಾಗಲೇ ಮಾರಾಟ ಮಾಡಿರುವ ಸಾವಿರಾರು ಟನ್ ಮಣ್ಣಿಗೆ ರಾಜಧನ ವಸೂಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.