ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದ ಬಳಿಯ ರೇವಣಸಿದ್ದೇಶ್ವರ ಬೆಟ್ಟದ ತಪ್ಪಲಲ್ಲಿ ‘ಪ್ರಧಾನಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಮತ್ತು ಉತ್ತಾನ ಮಹಾಭಿಯಾನ್’ (ಕುಸುಮ್– ಸಿ) ಅನುಷ್ಠಾನ ಮಾಡಲಾಗಿದೆ.
ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸುವ ಉದ್ದೇಶದಿಂದ ಕುಸುಮ್-ಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಸೋಲಾರ್ ಘಟಕಗಳಿಂದ ವಿದ್ಯುತ್ ಉತ್ಪಾದಿಸಿ ಬಳಿಕ ಅಲ್ಲಿಂದ ಫೀಡರ್‌ಗಳ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ಒದಗಿಸಲಾಗುವುದು. ಸ್ಥಳೀಯವಾಗಿಯೇ ವಿದ್ಯುತ್ ಉತ್ಪಾದಿಸಿ ಪೂರೈಸುವುದರಿಂದ ಗುಣಮಟ್ಟದ ವಿದ್ಯುತ್ ಲಭ್ಯವಾಗುತ್ತದೆ. ವಿದ್ಯುತ್ ಪರಿವರ್ತಕಗಳ ಮೇಲಿನ ಹೊರೆಯೂ ಇದರಿಂದ ತಗ್ಗಿಸುವ ಗುರಿ ಹೊಂದಲಾಗಿದೆ.
ರೇವಣಸಿದ್ದೇಶ್ವರ ಬೆಟ್ಟದ ಸುಮಾರು 20ಎಕರೆ ವಿಸ್ತೀರ್ಣದಲ್ಲಿ ₹18 ಕೋಟಿ ವೆಚ್ಚದಲ್ಲಿ ಸೌರ ವಿದ್ಯುತ್ ಘಟಕ 4 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದಿಸಿ ದಿನಕ್ಕೆ ಸುಮಾರು 8,000 ಯೂನಿಟ್ ಉತ್ಪಾದಿಸುತ್ತದೆ. ಇದರಿಂದ ಹೊನ್ನವಳ್ಳಿ ಹೋಬಳಿ 12 ಗ್ರಾಮಗಳಿಗೆ 936 ಕೃಷಿ ಪಂಪ್‌ಸೆಟ್ ಸ್ಥಳೀಯ ಫೀಡರ್ ಮೂಲಕ ಸಂಪರ್ಕಿಸಲಾಗಿದೆ.
ತಾಲ್ಲೂಕಿನ ಕೃಷಿಕರು ಶಕ್ತಿಯ ಭದ್ರತೆ, ಆರ್ಥಿಕ ಲಾಭ ಮತ್ತು ಪರಿಸರ ಸ್ನೇಹಿ ಕೃಷಿಗೆ ಉತ್ತೇಜನ ನೀಡಬಹುದು. ಮುಂದಿನ ದಿನದಲ್ಲಿ ತಾಲ್ಲೂಕಿನ 56 ಎಕರೆಗಳಲ್ಲಿ ಕರಡಿ, ಕೆರೆಗೊಡಿ, ಗುಂಗರಮಳೆ ಗ್ರಾಮದಲ್ಲಿ 12 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಕಾಮಗಾರಿ ಪ್ರಗತಿಯಲ್ಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರಿಬಿದನೂರಿನಲ್ಲಿ ಉದ್ಘಾಟಿಸಲಿದ್ದು, ಆನ್‌ಲೈನ್ ಮೂಲಕ ಹಾಲ್ಕುರಿಕೆ ಬಳಿಯಿರುವ ರೇವಣಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ಜೂನ್ 11 ರಂದು ಬೆಳಗ್ಗೆ 10.00 ಗಂಟೆಗೆ ಕಾರ್ಯಕ್ರಮ ಲೋಕರ್ಪಣೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಉಪಸ್ಥಿತಿಯಲ್ಲಿ ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.