ADVERTISEMENT

ಅನ್ನದಾತರ ಸಮಸ್ಯೆ ಬಗೆಹರಿಸಿ

ವಿದ್ಯುತ್ ಪರಿವರ್ತಕ ನೀಡದೆ ನಿರ್ಲಕ್ಷ್ಯ: ರೈತ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 6:09 IST
Last Updated 14 ಮಾರ್ಚ್ 2023, 6:09 IST
ಪಾವಗಡದಲ್ಲಿ ಸೋಮವಾರ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು
ಪಾವಗಡದಲ್ಲಿ ಸೋಮವಾರ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು   

ಪಾವಗಡ: ಸಾಲ ಮನ್ನಾ ಸೇರಿದಂತೆ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಶನೈಶ್ಚರ ದೇಗುಲ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಕೆಲಕಾಲ ರಸ್ತೆ ತಡೆ ನಡೆಸಿದರು.

ಬೆಸ್ಕಾಂ ಇಲಾಖೆ ರೈತರಿಗೆ ವಿದ್ಯುತ್ ಪರಿವರ್ತಕ ನೀಡದೆ ಸತಾಯಿಸುತ್ತಿದೆ. ಇದರಿಂದ ಕೊಳವೆಬಾವಿ ಇದ್ದರೂ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಸಾವಿರಾರು ರೂಪಾಯಿ ಬೆಳೆ ವಿಮೆ ಕಂತು ಪಾವತಿಸಿದರೂ ಪರಿಹಾರ ಸಿಗುತ್ತಿಲ್ಲ. ಬ್ಯಾಂಕ್ ಸಿಬ್ಬಂದಿ ರೈತರಿಗೆ ಸ್ಪಂದಿಸುತ್ತಿಲ್ಲ. ಬೆಳೆ ಸಾಲ ಸೇರಿದಂತೆ ಸವಲತ್ತು ಕಲ್ಪಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು.

ADVERTISEMENT

ಹೂವಿನ ಮಂಡಿಗಳಲ್ಲಿ ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಮೋಸ ಮಾಡಿ ಹೆಚ್ಚು ಹೂವನ್ನು ಕಡಿಮೆ ದರಕ್ಕೆ ಪಡೆದು ದುಪ್ಪಟ್ಟು ಲಾಭ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕೃಷಿ ಉತ್ಮನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಸರ್ಕಾರಗಳು ರೈತರನ್ನು ನಿರ್ಲಕ್ಷಿಸುತ್ತಿವೆ. ರೈತ ಪರ ಎಂದು ಹೇಳಿ ಮತ ಪಡೆದು ರೈತರಿಗೆ ಅನ್ಯಾಯ ಎಸಗಲಾಗುತ್ತಿದೆ. ಇದೇ ರೀತಿ ರೈತರನ್ನು ನಿರ್ಲಕ್ಷ್ಯ ಮಾಡಿದರೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಾಗುತ್ತದೆ ಎಂದು ಮಹಿಳಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಹಕ್ಕಿ ಎಚ್ಚರಿಸಿದರು.

ಅತಿವೃಷ್ಟಿಯಿಂದ ನಷ್ಟಕ್ಕೆ ಗುರಿಯಾಗಿರುವ ರೈತರ ಸಾಲ ಮನ್ನಾ ಮಾಡಬೇಕು. ಶೀಘ್ರ ಬೆಳೆ ವಿಮೆ ಪರಿಹಾರ ವಿತರಿಸಬೇಕು. ರೈತರ ಜಮೀನುಗಳಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಸಂಘಟನಾ ಕಾರ್ಯದರ್ಶಿ ದೊಡ್ಡಮಾಳಯ್ಯ, ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ಈಚಲಗೆರೆ ರವಿಶಂಕರಪ್ಪ, ಮಧುಗಿರಿ ಮೂರ್ತಿ, ಕೊರಟಗೆರೆ ಸಬೀರ್, ನೇರಳೆಕುಂಟೆ ನಾಗೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.