ADVERTISEMENT

ತುಮಕೂರು ಕ್ಷೇತ್ರದಲ್ಲೂ ಮೋದಿ ಸುನಾಮಿ

ತುಮಕೂರು ಜಿಲ್ಲಾ ಬಿಜೆಪಿ ಉಸ್ತುವಾರಿ ವಿ.ಸೋಮಣ್ಣ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 17:48 IST
Last Updated 11 ಏಪ್ರಿಲ್ 2019, 17:48 IST
ವಿ.ಸೋಮಣ್ಣ
ವಿ.ಸೋಮಣ್ಣ   

ತುಮಕೂರು: ‘ದೇಶದೆಲ್ಲೆಡೆ ಲೋಕಸಭಾ ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಸುನಾಮಿ ಇದ್ದು, ತುಮಕೂರು ಜಿಲ್ಲೆಯಲ್ಲೂ ಇದ್ದು, ಅದು ಬೂದಿ ಮುಚ್ಚಿದ ಕೆಂಡವಾಗಿದೆ. ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಅವರಿಗೆ ಕ್ಷೇತ್ರದ ಜನರು ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿರುವುದು ಪ್ರಚಾರದ ವೇಳೆ ಗೋಚರಿಸಿದೆ’ ಎಂದು ತುಮಕೂರು ಜಿಲ್ಲಾ ಬಿಜೆಪಿ ಉಸ್ತುವಾರಿ ಹಾಗೂ ಶಾಸಕ ವಿ.ಸೋಮಣ್ಣ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತುಮಕೂರು ಜಿಲ್ಲೆಗೆ ನಿರಂತರವಾಗಿ ಹೇಮಾವತಿ ನೀರು ಹರಿಸದೇ ಇದ್ದುದರಿಂದ ಕುಡಿಯುವ ನೀರಿಗೆ, ಬೆಳೆಗೆ ರೈತರು ನೀರು ಕ್ಷೇತ್ರದ ಜನರು ಪರದಾಡಿದ್ದಾರೆ. ಆ ಸಂಕಟವು ಈ ಚುನಾವಣೆ ವೇಳೆ ಆಕ್ರೋಶವಾಗಿ ಪರಿವರ್ತನೆಗೊಂಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆವಹಿಸಿತ್ತು. ಆದರೆ, ಈಗಿನ ಸರ್ಕಾರ ಏನೂ ಗಮನಹರಿಸಿಲ್ಲ. 70 ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಸಲಾಯಿತೇ ಹೊರತು ತುಮಕೂರು ಜಿಲ್ಲೆಯ ಕೆರೆಗಳಿಗೆ ನೀರು ಲಭಿಸಲಿಲ್ಲ’ ಎಂದು ಹೇಳಿದರು.

ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, 'ಮೋದಿ ಅವರ ಜನಪರ ಕಾರ್ಯಗಳು ಮತ್ತು ಸಾಧನೆಗಳು ಜನಮನ ಗೆದ್ದಿವೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದೇವೆ. ಜನರು ನರೇಂದ್ರ ಮೋದಿ ಅವರ ಸಾಧನೆಗೆ ಹೆಮ್ಮೆ ಪಡುತ್ತಿದ್ದಾರೆ’ ಎಂದರು.

ADVERTISEMENT

‘ತುಮಕೂರು ಜಿಲ್ಲೆಗೆ ನಿಗದಿಪಡಿಸಿದ ಹೇಮಾವತಿ ನೀರನ್ನು ಹರಿಸಬೇಕು. ಹರಿಯುವವರೆಗೂ ನಾವು ಬಿಡುವುದಿಲ್ಲ. ನೀರಿಗಾಗಿ ಹೋರಾಟ ಮಾಡುತ್ತೇವೆ. ಹೇಮಾವತಿ ನೀರಿಗಾಗಿ ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ ಅವರ ಹೋರಾಟ ಗಮನಾರ್ಹ’ ಎಂದರು.

ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ, 'ಯಾವುದೇ ನೈತಿಕತೆ ಇಲ್ಲದೇ ತುಮಕೂರು ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಂದು ಸ್ಪರ್ಧಿಸಿದ್ದಾರೆ. ಮುಖ್ಯಮಂತ್ರಿ ಘೋಷಿಸಿದ ಯೋಜನೆಗಳು ಬಡವರಿಗೆ, ರೈತರಿಗೆ ತಲುಪಿಲ್ಲ. ಮಂಡ್ಯ ಕ್ಷೇತ್ರದ ಜನರು ಲೋಕಸಭಾ ಕ್ಷೇತ್ತದ ಅಭ್ಯರ್ಥಿ ‘ನಿಖಿಲ್ ಎಲ್ಲದ್ದೀಯಪ್ಪಾ’ ಎಂದು ಕೇಳಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನೂ ಜನರು ಕೇಳುತ್ತಿದ್ದಾರೆ’ ಎಂದು ಹೇಳಿದರು.

‘ಈ ಚುನಾವಣೆಯು ಜಿಲ್ಲೆಯ ಜನರ ಸ್ವಾಭಿಮಾನದ ಪ್ರತಿಷ್ಠೆಯಾಗಿದೆ. ಜಿಲ್ಲೆಗೆ ಭವಿಷ್ಯದಲ್ಲಿ ಇನ್ನೆಂದು ಹೇಮಾವತಿ ನೀರು ಹರಿಯಲೇಬಾರದು ಎಂದು ಬಯಸಿದ್ದರೆ ಅಂಥವರು ದೇವೇಗೌಡರನ್ನು ಬೆಂಬಲಿಸಲಿ’ ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿ ಗಣೇಶ್,ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್,ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.