ADVERTISEMENT

ಸೋರೆಕುಂಟೆ ಸಾಗುವಳಿ ಚೀಟಿ ವಿವಾದ: ಶಿಸ್ತು ಕ್ರಮಕ್ಕೆ ತನಿಖಾ ತಂಡ ಶಿಫಾರಸ್ಸು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 19:48 IST
Last Updated 7 ಆಗಸ್ಟ್ 2019, 19:48 IST

ತುಮಕೂರು: ಬೆಳ್ಳಾವಿ ಹೋಬಳಿ ಸೋರೆಕುಂಟೆ ಗ್ರಾಮದ ಸರ್ವೆ ನಂಬರ್ 41 ರಲ್ಲಿ 44 ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಣೆ ಮಾಡಿರುವುದಲ್ಲಿ ಅಕ್ರಮಗಳಾಗಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಉಪವಿಭಾಗಾಧಿಕಾರಿ ನೇತೃತ್ವದ ತನಿಖಾ ತಂಡವು ಪ್ರಕರಣದಲ್ಲಿ ಲೋಪಗಳು ಆಗಿರುವುದನ್ನು ಪತ್ತೆ ಮಾಡಿದೆ.

ತುಮಕೂರು ತಾಲ್ಲೂಕಿನ ಹಿಂದಿನ ತಹಶೀಲ್ದಾರ್ ಕೆ.ಆರ್.ನಾಗರಾಜು ಸೇರಿದಂತೆ ತಾಲ್ಲೂಕು ಕಚೇರಿಯ ಬಗರ್ ಹುಕುಂ ಸಾಗುವಳಿ ವಿಷಯ ನಿರ್ವಾಹಕ, ಶಿರಸ್ತೇದಾರರು, ಸಂಬಂಧಪಟ್ಟ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗೆ ತನಿಖಾ ತಂಡವು ಶಿಫಾರಸ್ಸು ಮಾಡಿದೆ.

ಸೋರೆಕುಂಟೆ ಗ್ರಾಮದ ಸಾಗುವಳಿ ಚೀಟಿ ವಿತರಣೆಯಲ್ಲಿ ಅಕ್ರಮ, ಅವ್ಯವಹಾರ ಆಗಿವೆ ಎಂದು ಆರೋಪಿಸಿ ಬೆಳಗುಂಬ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಸ್.ವೆಂಕಟೇಶ್ ಅವರು ದೂರು ಸಲ್ಲಿಸಿದ್ದರು. ಇದಕ್ಕೆ ಪೂರಕವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅವರೂ ಪತ್ರ ಬರೆದಿದ್ದರು.

ADVERTISEMENT

ಇದರ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿಗಳು ಇತ್ತೀಚೆಗೆ ತುಮಕೂರು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದರು. ತಂಡವು ಸಮಗ್ರವಾಗಿ ತನಿಖೆ ನಡೆಸಿ, ಸಾಗುವಳಿ ಚೀಟಿ ವಿತರಣೆಯಲ್ಲಿ ಲೋಪದೋಷಗಳಾಗಿವೆ ಎಂಬುದನ್ನು ಪತ್ತೆ ಮಾಡಿದೆ. 11 ಪುಟಗಳ ವರದಿಯನ್ನು ಜಿಲ್ಲಾಧಿಕಾರಿಗೆ ಈಚೆಗೆ ಸಲ್ಲಿಸಿದೆ.

ವರದಿಯಲ್ಲೇನಿದೆ: ತಹಶೀಲ್ದಾರ್ ಕೆ.ಆರ್.ನಾಗರಾಜು ಅವರು ಫಲಾನುಭವಿಗಳ ಲಭ್ಯವಿರುವ ಜಮೀನಿನ ಬಗ್ಗೆ ಸರಿಯಾಗಿ ಪರಿಶೀಲನಾ ವರದಿ ಪಡೆಯದೆ ಹಾಗೂ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಅಂದರೆ 2019ರ ಫೆಬ್ರುವರಿ 23ರಂದು ಸಾಗುವಳಿ ಚೀಟಿಗೆ ಸಹಿ ಮಾಡಿ ಕರ್ತವ್ಯಲೋಪ ಎಸಗಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ತಂಡವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.