ADVERTISEMENT

ವೆಂಕಟರಮಣ ದೇಗುಲದಲ್ಲಿ ವಿಶೇಷ ಪೂಜೆ

ಮಧುಗಿರಿ: ಏಕಾದಶಿ ಅಂಗವಾಗಿ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 6:08 IST
Last Updated 25 ಡಿಸೆಂಬರ್ 2020, 6:08 IST
ಮಧುಗಿರಿ ವೆಂಕಟರಮಣ ಸ್ವಾಮಿಯ
ಮಧುಗಿರಿ ವೆಂಕಟರಮಣ ಸ್ವಾಮಿಯ   

ಮಧುಗಿರಿ: ಪಟ್ಟಣದ ಹೃದಯ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ 22ನೇ ವೈಕುಂಠ ಏಕಾದಶಿ ಅಂಗವಾಗಿ ಮುಂಜಾನೆಯಿಂದಲೇ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿ ವರ್ಷದಂತೆ ಈ ಬಾರಿಯೂ ಸ್ವಾಮಿಯ ವೈಕುಂಠ ಏಕಾದಶಿಯನ್ನು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಗುತ್ತಿದೆ. ಕೋವಿಡ್–19 ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಹಾಗೂ ಅಂತರ ಕಾಯ್ದುಕೊಂಡು ದೇವಾಲಯ ಪ್ರವೇಶಿಸಲು ಸೂಚಿಸಲಾಗಿದೆ.

ವೆಂಕಟರಮಣ ಸ್ವಾಮಿಯ ತದ್ರೂಪಿಯಾಗಿರುವ ಮಧುಗಿರಿ ವೆಂಕಟರಮಣ ವಿಗ್ರಹವು 6 ಅಡಿ ಎತ್ತರ ಹಾಗೂ 4 ಅಡಿ ಅಗಲವಿದೆ. ಈ ಸ್ವಾಮಿಯ ಎಡ ಭಾಗದಲ್ಲಿ ಅಲುಮೇಲು ಮಂಗಮ್ಮ ಹಾಗೂ ಬಲ ಭಾಗದಲ್ಲಿ ಪದ್ಮಾವತಿ ದೇವಾಲಯಗಳಿವೆ.

ADVERTISEMENT

ಸ್ಥಳೀಯರು ಹಾಗೂ ನೆರೆ ಊರುಗಳಿಂದ ಸಾವಿರಾರು ಭಕ್ತರು ದೇವಾಲಯದ ಅವರಣದಲ್ಲಿ ಸಾಲಿನಲ್ಲಿ ನಿಂತು ವೈಕುಂಠ ಏಕಾದಶಿಯಂದು ದರ್ಶನ ಹಾಗೂ ದ್ವಾರದರ್ಶನ ಪಡೆಯುವುದು ವಾಡಿಕೆ.

ಸ್ವಾಮಿಗೆ ವಿಶೇಷ ಪೂಜೆ: ಅಭಿಷೇಕ, ನಿತ್ಯ ಆರಾಧನೆ ಸೇವೆ, ಸಹಸ್ರ ನಾಮ, ಮಹಾಮಂಗಳಾರತಿ, ಪ್ರಾಕಾರೋತ್ಸವ ಹಾಗೂ ದ್ವಾರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

22ನೇ ವರ್ಷದ ವೈಕುಂಠ ಏಕಾದಶಿ ಅಂಗವಾಗಿ ಶುಕ್ರವಾರ ವಿವಿಧ ಮಹಿಳಾ ಸಂಘಗಳಿಂದ ನಿರಂತರ ಭಕ್ತಿ ಗೀತೆಗಳು ಹಾಗೂ ಗೀತೆಗಳ ಗಾಯನ ಆಯೋಜಿಸಲಾಗಿದೆ.

ದೇವಾಲಯ ಅವರಣದಲ್ಲಿ ಹೂವಿನ ಅಲಂಕಾರ ಹಾಗೂ ಪ್ರಮುಖ ಬೀದಿಗಳಲ್ಲಿ ಬಾಳೆ ಕಂದು, ಬಣ್ಣ ಬಣ್ಣದ ವಿದ್ಯುತ್ ದೀಪ ಹಾಗೂ ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿದೆ. ಚಕ್ರವರ್ತಿ ಸೂಲಿಬೆಲೆ ಯುವ ಬ್ರಿಗೇಡ್ ತಂಡದ ಸದಸ್ಯರು ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.