ತುಮಕೂರು: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಪಿ.ಮುದ್ದಹನುಮೇಗೌಡ ಏ. 4ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ಮಹಿಳಾ ಮುಖಂಡರ ಜೊತೆ ನಡೆದ ಸಭೆಯಲ್ಲಿ ಮಾತನಾಡಿದರು.
ನಾಮಪತ್ರ ಸಲ್ಲಿಕೆಯ ದಿನ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಬೇಕು. ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯಡಿ ₹2 ಸಾವಿರ ಕೊಡುತ್ತಿದ್ದರೂ ಮಹಿಳೆಯರು ಬಂದಿಲ್ಲ ಎಂದು ಆಡಿಕೊಳ್ಳುತ್ತಾರೆ. ಮಹಿಳಾ ಶಕ್ತಿ ನೋಡಿ ಸೋಮಣ್ಣ ಅವತ್ತೇ ಶಸ್ತ್ರ ತ್ಯಜಿಸಿ ತುಮಕೂರು ಬಿಟ್ಟು ಬೆಂಗಳೂರಿಗೆ ಹೊರಟು ಹೋಗಬೇಕು ಎಂದರು.
‘ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗುತ್ತದೆ’ ಎಂದು ಕುಹಕವಾಡಿದ ಬಿಜೆಪಿ ನಾಯಕರು, ಈಗ ಮೋದಿ ಹೆಸರಿನ ಜತೆ ಗ್ಯಾರಂಟಿ ಪದವನ್ನು ಗಟ್ಟಿಯಾಗಿ ಅಂಟು ಹಾಕುತ್ತಿದ್ದಾರೆ. ಗ್ಯಾರಂಟಿ ಬಗ್ಗೆ ಮಹಿಳೆಯರಿಗೆ ಸ್ಪಷ್ಟವಾಗಿ ತಿಳಿಸಬೇಕು. ಇಲ್ಲದಿದ್ದರೆ ನಮ್ಮ ಯೋಜನೆಗಳಿಗೆ ಬಿಜೆಪಿಯವರು ತಮ್ಮ ಹೆಸರು ಹಾಕಿಕೊಂಡು ತಿರುಗುತ್ತಾರೆ ಎಂದು ಹೇಳಿದರು.
ಮುದ್ದಹನುಮೇಗೌಡ ಗೆಲುವಿಗೆ ಎಲ್ಲರು ಶ್ರಮಿಸಬೇಕು. ಬೇರೆಯವರು ಸಂಸದರಾದರೆ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ಗ್ಯಾರಂಟಿ ಯೋಜನೆಗಳು ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ನೀಡಿಲ್ಲ. ಎಲ್ಲ ತಾಯಂದಿರಿಗೆ ಕೊಟ್ಟಿದ್ದೇವೆ. ಎಲ್ಲರಿಗೂ ತಿಳಿಸಿ, ಮನವೊಲಿಸಬೇಕು ಎಂದು ಕೇಳಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.