ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷಾ ಕ್ರಮದಲ್ಲಿ ಬದಲಾವಣೆ ಆದರೂ, ಶಿಕ್ಷಕರ ಪಠ್ಯಬೋಧನೆ ಮತ್ತು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಪೂರ್ವ ತಯಾರಿಯಿಂದಾಗಿ ವಿದ್ಯಾರ್ಥಿಗಳು ಸುಲಲಿತವಾಗಿ ಪೂರ್ವಭಾವಿ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ.
ಈ ಹಿಂದಿನ ವರ್ಷ ವಾರ್ಷಿಕ ಪರೀಕ್ಷೆಯಲ್ಲಿ ಬಹು ಆಯ್ಕೆ ಮಾದರಿಯ 10, ಒಂದು ಅಂಕದ 6, ಎರಡು ಅಂಕದ 16, ಮೂರು ಅಂಕದ 6 ಹಾಗೂ ನಾಲ್ಕು ಅಂಕದ 4 ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು.
ಈ ಬಾರಿ ಬಹು ಆಯ್ಕೆ ಮಾದರಿಯ ಎರಡು ಪ್ರಶ್ನೆಗಳನ್ನು ಕಡಿಮೆ ಮಾಡಿದ್ದಾರೆ. ಆ ಎರಡು ಪ್ರಶ್ನೆಗಳನ್ನು ಒಂದು ಅಂಕದ ಪ್ರಶ್ನಾವಳಿಗೆ ಸೇರಿಸಿದ್ದಾರೆ. ಅಲ್ಲದೆ, ಅನ್ವಯಿಕ ಮಾದರಿ ಪ್ರಶ್ನೆಗಳನ್ನು ಪೂರ್ವಭಾವಿ ಪರೀಕ್ಷೆಯಲ್ಲಿ ಹೆಚ್ಚು ಕೇಳುತ್ತಿದ್ದಾರೆ.
ಈ ಬಾರಿ ಮಂಡಳಿಯು ಪರೀಕ್ಷಾ ಕ್ರಮದ ನೀಲನಕ್ಷೆ ಪ್ರಕಟ ಮಾಡಿಲ್ಲ. ಹಾಗಾಗಿ ಯಾವ ಯಾವ ಪಾಠದಲ್ಲಿ ಎಷ್ಟೆಷ್ಟು ಅಂಕದ, ಎಷ್ಟು ಪ್ರಶ್ನೆಗಳು ಬರುತ್ತವೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ಎಲ್ಲ ಶಿಕ್ಷಕರೂ ಚೆನ್ನಾಗಿ ಪಾಠ ಮಾಡಿ, ಪರೀಕ್ಷೆಯನ್ನು ಎದುರಿಸಲು ತಯಾರಿ ಮಾಡಿದ್ದಾರೆ. ಹಾಗಾಗಿ ಯಾವ ಪ್ರಶ್ನೆ ಕೇಳಿದರೂ, ಉತ್ತರಿಸಲು ಸಿದ್ಧರಾಗಿದ್ದೇವೆ. ಸೋಮವಾರದಿಂದ (ಫೆ.17) ನಡೆಯುತ್ತಿರುವ ಪೂರ್ವಭಾವಿ ಪರೀಕ್ಷೆಗಳನ್ನು ಚೆನ್ನಾಗಿ ಬರೆಯುತ್ತಿದ್ದೇವೆ ಎಂದು ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ (ಕೆಪಿಎಸ್) ವಿದ್ಯಾರ್ಥಿನಿ ಆರ್.ಧನಲಕ್ಷ್ಮಿ ಆತ್ಮವಿಶ್ವಾಸದಿಂದ ಹೇಳಿದರು.
ಈ ಹಿಂದೆ ಪಾಠದ ನಂತರದ ಪುಟಗಳಲ್ಲಿ ಇರುವ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈಗ ಪಾಠದ ಮಧ್ಯದಲ್ಲಿನ ವಿಷಯವನ್ನು ಪ್ರಶ್ನೆಯಾಗಿಸಿ ಕೇಳುತ್ತಿದ್ದಾರೆ. ನಾನಂತೂ ಎಲ್ಲ ಪಾಠಗಳನ್ನು ಚೆನ್ನಾಗಿ ಓದಿಕೊಂಡಿದ್ದೇವೆ. ಶಿಕ್ಷಕರು ಕೊಟ್ಟ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುತ್ತ, ವಾರ್ಷಿಕ ಪರೀಕ್ಷೆ ಎದುರಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ ಎಂದು ವಿದ್ಯಾರ್ಥಿನಿ ಟಿ.ಎಚ್.ಹೇಮಾ ತಿಳಿಸಿದರು.
ಪರೀಕ್ಷಾ ಕ್ರಮದಲ್ಲಿನ ಬದಲಾವಣೆಯನ್ನು ಮಂಡಳಿಯು ಅಕ್ಟೋಬರ್ ವೇಳೆಗಾಗಲೇ ನಮಗೆ ತಿಳಿಸಿತ್ತು. ಹಾಗಾಗಿ ಆ ಕ್ರಮದ ಅನುಸಾರವೇ ಬೋಧನೆ ಮಾಡಿದ್ದೇವೆ. ಈ ಬದಲಾವಣೆಯಿಂದ ನಮ್ಮ ಶಾಲಾ ಮಟ್ಟದಲ್ಲಿಯೇ ಉತ್ತೀರ್ಣ ಫಲಿತಾಂಶ ಶೇ 3ರಷ್ಟು ಹೆಚ್ಚಳ ಆಗಿದೆ ಎಂದು ಎಂಪ್ರೆಸ್ ಕೆಪಿಎಸ್‌ನ ಗಣಿತ ಶಿಕ್ಷಕ ಎ.ರಾಮಸ್ವಾಮಿ ತಿಳಿಸಿದರು. ಈ ಮಾತನ್ನು ಹಿಂದಿ ಶಿಕ್ಷಕ ಹೊಸಕೆರೆ ರಿಜ್ವಾನ್‌ಬಾಷಾ ಸಹ ಪುನರುಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.