ಕೊಡಿಗೇನಹಳ್ಳಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಠಾಣೆಗೆ ಬರುವ ಜನರು ನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. ಶೀಘ್ರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆಂಧ್ರಕ್ಕೆ ಹೊಂದಿಕೊಂಡಿರುವ ಕೊಡಿಗೇನಹಳ್ಳಿ ಮಧುಗಿರಿ ತಾಲ್ಲೂಕಿನಲ್ಲಿ ದೊಡ್ಡ ಹೋಬಳಿ. ಸುತ್ತಲಿನ ಪುರವರ ಹಾಗೂ ಐಡಿಹಳ್ಳಿ ಹೋಬಳಿಗಳ ಹಲವು ಗ್ರಾಮಗಳಿಗೆ ಕೇಂದ್ರ ಭಾಗದಲ್ಲಿದೆ. 1983ರಲ್ಲಿ ಪಟ್ಟಣದ ಬಸ್ ನಿಲ್ದಾಣದ ಸಮೀಪವೇ ಪೊಲೀಸ್ ಠಾಣೆ ನಿರ್ಮಿಸಿದ್ದರಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಿತ್ತು.
ನಾಲ್ಕು ದಶಕದ ನಂತರ ಠಾಣೆಯ ಕೊಠಡಿ ಹಾಗೂ ಚಾವಣಿ ಶಿಥಿಲಗೊಂಡಿದ್ದರ ಬಗ್ಗೆ ಎರಡು ವರ್ಷಗಳ ಹಿಂದೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಆಗ ಭೇಟಿ ನೀಡಿದ್ದ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಠಾಣೆ ನಿರ್ಮಾಣದ ಭರವಸೆ ನೀಡಿದ್ದರು. ಗೃಹ ಸಚಿವ ಪರಮೇಶ್ವರ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ನೂತನ ಕಟ್ಟಡಕ್ಕೆ ಭೂಮಿಪೂಜೆ ಸಹ ನೆರವೇರಿಸಿದ್ದರು. ಈ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಆದರೆ ದೊಡ್ಡ ಹೋಬಳಿ ಕೇಂದ್ರಕ್ಕೆ ಸಿಬ್ಬಂದಿ ಕೊರತೆಯಾಗಿದೆ.
ಸಿಬ್ಬಂದಿ ವಿವರ: ಪಿಎಸ್‌ಐ ಎರಡು ಹುದ್ದೆಯಲ್ಲಿ ಒಂದು ಖಾಲಿ ಇದೆ. ಮೂವರು ಎಎಸ್‌ಐಗಳಿದ್ದಾರೆ. ಎಂಟು ಹೆಡ್ ಕಾನ್‌ಸ್ಟೆಬಲ್ ಹುದ್ದೆಯಲ್ಲಿ ಮೂರು ಖಾಲಿಯಿವೆ. 17 ಪೊಲೀಸ್ ಕಾನ್‌ಸ್ಟೆಬಲ್‌ಗಳಿದ್ದಾರೆ.
ಜಾಸ್ತಿಯಾಗದ ಸಿಬ್ಬಂದಿ: ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಆರಂಭವಾದಾಗ ಇಲ್ಲಿ ಸಿಬ್ಬಂದಿ ಎಷ್ಟಿತ್ತೊ ಈಗಲೂ ಅಷ್ಟೇ ಸಿಬ್ಬಂದಿ ಇರುವುದು ಕಾರ್ಯ ನಿರ್ವಹಣೆಗೆ ಹಿನ್ನಡೆಯಾಗಿದೆ. ಗಡಿಭಾಗದಲ್ಲಿ ಅಪರಾಧಗಳನ್ನು ನಿಯಂತ್ರಿಸಲು, ಸಂಚಾರ ನಿಯಮ ಪಾಲನೆಗೆ ನಿಗಾವಹಿಸಲು, ಅಪಘಾತಗೊಂಡಾಗ ತುರ್ತಾಗಿ ಸ್ಪಂದಿಸಲು, ಬೀಟ್, ಬಂದೋಬಸ್ತ್, ಠಾಣಾ ಕೆಲಸ, ಕಂಪ್ಯೂಟರ್ ನಿರ್ವಹಣೆ, ಚುನಾವಣಾ ಕರ್ತವ್ಯ ಸೇರಿದಂತೆ ಇತರ ಕಾನೂನು ಸುವ್ಯವಸ್ಥೆ ಹಾಗೂ ಹೆಚ್ಚುವರಿ ಕೆಲಸ ನಿರ್ವಹಿಸಲು 15ರಿಂದ 20 ಸಿಬ್ಬಂದಿ ಅಗತ್ಯವಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ನಮ್ಮ ಭಾಗದ ಹಲವು ಗ್ರಾಮಗಳು ಆಂಧ್ರ ಗಡಿಯಲ್ಲಿರುವ ಕಾರಣ ಇಲ್ಲಿನ ನೂರಾರು ಮಹಿಳೆಯರು ಪ್ರತಿದಿನ ಹಿಂದೂಪುರ ಹಾಗೂ ಚೆಕ್‌ಪೋಸ್ಟ್‌ನಲ್ಲಿರುವ ಗಾರ್ಮೆಂಟ್ಸ್ ಮತ್ತು ಇತರೆ ಕಂಪನಿಗಳಲ್ಲಿ ಕೆಲಸಗಳಿಗೆ ಹೋಗಿ ಬರುವುದರಿಂದ ಇಲ್ಲಿ ಕಳ್ಳತನ ಹಾಗೂ ಇತರೆ ಅಪರಾಧ ಕೃತ್ಯ ತಪ್ಪಿಸಲು ಪೊಲೀಸರ ಗಸ್ತು ಅವಶ್ಯಕ.ರಾಜಶೇಖರ್ ರೆಡ್ಡಿ ಕಡಗತ್ತೂರು
ಸಂಚಾರ ನಿಯಮ ಪಾಲನೆ ಮದ್ಯವ್ಯಸನದ ದುಷ್ಟರಿಣಾಮ ಅಪರಾಧ ಕೃತ್ಯಗಳ ಪರಿಣಾಮಗಳ ಬಗ್ಗೆ ಎಲ್ಲ ಶಾಲೆ ಕಾಲೇಜು ಹಾಗೂ ಪ್ರತಿ ಗ್ರಾಮಗಳಲ್ಲಿ ಕಾನೂನು ಅರಿವು ಪೋಕ್ಸೊ ಕಾಯ್ದೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಪ್ರತ್ಯೇಕ ಪೊಲೀಸ್ ತಂಡವನ್ನು ರಚಿಸಬೇಕಿದೆ.ಲಕ್ಷ್ಮಿನರಸೇಗೌಡ ತೆರಿಯೂರು
ಗೃಹಸಚಿವ ಜಿ.ಪರಮೇಶ್ವರ ಅವರು ಪಟ್ಟಣದಲ್ಲಿ ಈಗಾಗಲೇ ನೂತನ ಪೊಲೀಸ್ ಠಾಣೆ ನಿರ್ಮಾಣಕ್ಕೆ ಚಾಲನೆ ನೀಡಿದ ಹಾಗೆ ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಮತ್ತು ದೂರದ ಗ್ರಾಮಗಳಲ್ಲಿನ ಬಡವರ ಸಮಸ್ಯೆಗಳಿಗೆ ಒತ್ತು ನೀಡುವ ಉದ್ದೇಶದಿಂದ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು.ಕೆ.ಎನ್. ವಿಜಯಕುಮಾರ್ ಕೋಡ್ಲಾಪುರ
ಈಗಿರುವ ಸಿಬ್ಬಂದಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು ಸಾಕಾಗುತ್ತಿದೆ. ಗಡಿಭಾಗದಲ್ಲಿನ ಅಪರಾಧ ಕೃತ್ಯ ಮತ್ತು ಗ್ರಾಮಗಳಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ನಿಗಾವಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು.ಸಿ.ನಂಜಪ್ಪ ಚಿಕ್ಕದಾಳವಟ್ಟ ಗ್ರಾ.ಪಂ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.