ಕುಣಿಗಲ್: ಪದವಿ ಪಡೆದು ಬೇರೆಯವರ ಬಳಿ ಉದ್ಯೋಗ ಮಾಡುವ ಬದಲು, ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಯುವಜನರು ನವೋದ್ಯಮ ಪ್ರಾರಂಭಿಸಿ ಎಂದು ತುಮಕೂರು ಸಿಡಾಕ್ ಜಂಟಿ ನಿರ್ದೇಶಕ ಎಂ.ಎಸ್.ಮಧು ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗಕೋಶ, ಐಕ್ಯೂಎಸಿ, ಸಿಡಾಕ್ ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಯಿಂದ ನಡೆದ ಉದ್ಯಮಶೀಲತೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರು.
ಸ್ವಯಂ ಉದ್ಯೋಗ ಸೃಷ್ಟಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ, ಯಂಗ್ ಇಂಡಿಯಾ ಎಂಬ ಘೋಷಣೆಗಳಡಿ ಯುವಜನರನ್ನು ಉದ್ಯಮಗಳತ್ತ ಆಕರ್ಷಿಸಿ, ಸೂಕ್ತ ಮಾರ್ಗದರ್ಶನ, ಆರ್ಥಿಕ ಸಹಕಾರ ನೀಡುತ್ತಿದೆ. ಲಭ್ಯವಿರುವ ಅವಕಾಶ ಬಳಸಿಕೊಂಡು ಉದ್ಯಮಿಗಳಾಗಿ ಎಂದರು.
ಮುಧುಗಿರಿಯ ಯುವ ಉದ್ಯಮಿ ಪದ್ಮಶ್ರೀ ಮಾತನಾಡಿ, ಭಾರತ ವಿಶ್ವದಲ್ಲೇ ಅತಿಹೆಚ್ಚಿನ ಮಾನವ ಸಂಪನ್ಮೂಲ ಹೊಂದಿದೆ. ಯುವಜನರು ಸೇವಾಕ್ಷೇತ್ರ, ಉತ್ಪಾದನೆ, ಸಲಹೆ, ಕಿರು ಉದ್ಯಮ ಪ್ರಾರಂಭಿಸಬೇಕು. ಮಹಿಳೆಯರು ಗೃಹ ಕೈಗಾರಿಕೆಗಳನ್ನು ಪ್ರಾರಂಭಿಸಿ ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ರಾಮಾಂಜನಪ್ಪ, ಉದ್ಯೋಗಕೋಶದ ಅಧಿಕಾರಿ ಸಿ.ಆರ್.ಮನೋಜ್, ಐಕ್ಯೂಎಸಿ ಸಂಚಾಲಕ ಟಿ.ಎನ್.ನರಸಿಂಹಮೂರ್ತಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಟಿ.ಕೆ.ಕೆಂಪಯ್ಯ, ಎಂ.ಎಸ್.ಮೋಹನಕುಮಾರ್, ಚಂದ್ರಹಾಸ್, ನಾಗಮಣಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.