ADVERTISEMENT

ಅ.19ರಂದು ರಾಜ್ಯ ಮಟ್ಟದ ಮಧುಮೇಹ ಸಮ್ಮೇಳನ

ರಾಜ್ಯದ ವಿವಿಧ ಭಾಗದಿಂದ ಸಾವಿರಕ್ಕೂ ಹೆಚ್ಚು ವೈದ್ಯರು ಪಾಲ್ಗೊಳ್ಳಲಿರುವ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 6:16 IST
Last Updated 17 ಅಕ್ಟೋಬರ್ 2019, 6:16 IST
ಡಾ.ಟಿ.ಎಸ್.ಶಶಿಧರ್‌
ಡಾ.ಟಿ.ಎಸ್.ಶಶಿಧರ್‌   

ತುಮಕೂರು: ನಗರದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಅ.19 ಮತ್ತು 20ರಂದು ರಾಜ್ಯ ಮಟ್ಟದ ಮಧುಮೇಹ ಸಮ್ಮೇಳನ ನಡೆಯಲಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮ್ಮೇಳನ ಆಯೋಜನಾ ಸಮಿತಿ ಅಧ್ಯಕ್ಷ ಡಾ.ಟಿ.ಎಸ್.ಶಶಿಧರ್,‘ ಅ.19ರಂದು ಬೆಳಿಗ್ಗೆ 11.20ಕ್ಕೆ ಡಾ.ಜಿ.ಪರಮೇಶ್ವರ ಉದ್ಘಾಟಿಸುವರು. ಡಾ.ಜೆ.ಅರವಿಂದ್, ಡಾ.ಶ್ರೀನಿವಾಸಮೂರ್ತಿ, ಡಾ.ಕುರಿಯನ್, ಡಾ.ಜಿ.ಎನ್.ಪ್ರಭಾಕರ್ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ‌ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಹೆಚ್ಚುತ್ತಿರುವ ಮಧುಮೇಹ ರೋಗಿಗಳಿಗೆ ಚಿಕಿತ್ಸೆ ನೀಡಲು ಯುವ ವೈದ್ಯರಿಗೆ ಸಮ್ಮೇಳನ ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಿದರು.

ADVERTISEMENT

’25 ವರ್ಷಗಳ ಹಿಂದೆ ಮಧುಮೇಹಕ್ಕೆ ನೀಡುತ್ತಿದ್ದ ಚಿಕಿತ್ಸಾ ವಿಧಾನಕ್ಕೆ ಹೋಲಿಸಿದರೆ ಚಿಕಿತ್ಸಾ ವಿಧಾನಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ವೈದ್ಯರಿಗೆ ಅದರಲ್ಲೂ ಯುವ ವೈದ್ಯರಿಗೆ ಚಿಕಿತ್ಸಾ ವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿಯ ಅಗತ್ಯವಿದೆ’ ಎಂದು ತಿಳಿಸಿದರು.

’ಮಧುಮೇಹ ಚಿಕಿತ್ಸಾ ವಿಧಾನ, ಈ ಕುರಿತು ಜಾಗತಿಕ ಮಟ್ಟದಲ್ಲಿ ಆದ ಆವಿಷ್ಕಾರಗಳು, ಸಂಶೋಧನೆಗಳ ಬಗ್ಗೆ ನುರಿತ ಹಿರಿಯ ವೈದ್ಯರು ವಿಷಯ ಮಂಡನೆ ಮಾಡಲಿದ್ದಾರೆ’ ಎಂದರು.

’ವೈದ್ಯಕೀಯ ವಿದ್ಯಾರ್ಥಿಗಳಿಗೆ, ಯುವ ವೈದ್ಯರಿಗೆ ಮತ್ತು ನರ್ಸಿಂಗ್ ಸಿಬ್ಬಂದಿ ವರ್ಗಕ್ಕೆ ಇನ್ಸುಲಿನ್ ಕಾರ್ಯಾಗಾರ ಮತ್ತು ಪಥ್ಯ ಕಾರ್ಯಾಗಾರ ಆಯೋಜಿಸಲಾಗಿದೆ. ಅಲ್ಲದೇ, ಸಿಹಿಮೂತ್ರ ಪಾದ ರೋಗ ಚಿಕಿತ್ಸೆಯ ವಿಧಾನಗಳ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ’ ಎಂದು ವಿವರಿಸಿದರು.

ಸನ್ಮಾನ: ’ಜೀವ ಮಾನದ ಸಾಧನೆಗಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಅಧ್ಯಕ್ಷ ಡಾ.ಸಿ.ಎನ್.ಮಂಜುನಾಥ್ ಅವರನ್ನು ಸನ್ಮಾನಿಸಲಾಗುತ್ತಿದೆ. ಅದೇ ರೀತಿ ತುಮಕೂರಿನ ಡಾ.ರಾಜಶೇಖರ್, ಹಿರಿಯ ವೈದ್ಯ ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.

ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ.ಪರಮೇಶ್ವರಪ್ಪ, ಡಾ.ಶಾಲಿನಿ, ಡಾ.ಪುಟ್ಟರಾಜು, ಡಾ.ಮುರಳೀಧರ್ ಇತರ ವೈದ್ಯರು ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.