
ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕೊಕ್ಕೊ ಪಂದ್ಯಾವಳಿಗೆ ಗುರುವಾರ ಚಾಲನೆ ನೀಡಲಾಯಿತು.
ನಾಲ್ಕು ದಿನ ನಡೆಯುವ ಈ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಿಂದ 71 ತಂಡ, ಮಹಿಳಾ ವಿಭಾಗದಿಂದ 36 ತಂಡ ಭಾಗವಹಿಸಿವೆ. 2,000 ಕ್ರೀಡಾಪಟುಗಳು ಮತ್ತು 150ಕ್ಕೂ ಹೆಚ್ಚು ಕ್ರೀಡಾಧಿಕಾರಿಗಳು ಪಾಲ್ಗೊಂಡಿದ್ದಾರೆ.
ಉದ್ಘಾಟನಾ ಪಂದ್ಯಗಳಲ್ಲಿ ಪುರುಷರ ವಿಭಾಗದಲ್ಲಿ ಆತಿಥೇಯ ತಿಪಟೂರು ತಂಡವು ಹಂಸಬಾವಿ ತಂಡವನ್ನು ಮಣಿಸಿತು. ಮಹಿಳಾ ವಿಭಾಗದಲ್ಲಿ ತಿಪಟೂರು ತಂಡವು ಹನೂರು ತಂಡದ ವಿರುದ್ಧ ಜಯಗಳಿಸಿ ಕ್ರೀಡಾಕೂಟಕ್ಕೆ ಶುಭಾರಂಭ ನೀಡಿತು.
ಕ್ರೀಡಾಕೂಟದಲ್ಲಿ ಲೀಗ್ ಕಮ್ ನಾಕೌಟ್ ಪಂದ್ಯಾವಳಿ ನಡೆಯುತ್ತಿದ್ದು, ಶುಕ್ರವಾರ ಸಂಜೆ ವೇಳೆಗೆ 65 ಪಂದ್ಯ ನಡೆಯಿತು. ಪುರುಷರ ವಿಬಾಗದಲ್ಲಿ ಹಾಸನಾಂಬ ತಂಡ 4 ಅಂಕದೊಂದಿಗೆ ದೊಡ್ಡಬಳ್ಳಾಪುರ ತಂಡವನ್ನು ಮಣಿಸಿ, ಕೋಲಾರ 2 ಅಂಕದೊಂದಿಗೆ ಬ್ಯಾಡಗಿ ತಂಡವನ್ನು ಮಣಿಸಿತು. ಬಾಗಲಕೋಟೆ 20 ಅಂಕದೊಂದಿಗೆ ಹಿರಿಯೂರು ತಂಡವನ್ನು, ದಾವಣಗೆರೆ 2 ಅಂಕದೊಂದಿಗೆ ಮಲ್ನಾಡ್ ತಂಡ ಮಣಿಸಿದರೆ, ವಿಜಯಪುರ ತಂಡ 2 ಅಂಕದೊಂದಿಗೆ ಹರಪನಹಳ್ಳಿ ತಂಡವನ್ನು ಮಣಿಸಿತು. ದಾವಣಗೆರೆ ತಂಡ 7 ಅಂಕದೊಂದಿಗೆ ಮೈಸೂರು ತಂಡ ಮಣಿಸಿ, ಬೊಮ್ಮನಹಳ್ಳಿ ತಂಡ 2 ಅಂಕದೊಂದಿಗೆ ಮೈಸೂರು ತಂಡವನ್ನು ಮಣಿಸಿದವು.
ಮಹಿಳಾ ವಿಭಾಗದಲ್ಲಿ ಬೆಂಗಳೂರು ತಂಡ ಆರು ಅಂಕದೊಂದಿಗೆ ಕೋಲಾರವನ್ನು ಮಣಿಸಿತು. ರಾಯಚೂರು ತಂಡ 4 ಅಂಕದೊಂದಿಗೆ ಚಿತ್ರಾಕೂಟ ತಂಡವನ್ನು, ಶಾಂತಿಕೇತನ ತಂಡ 4 ಅಂಕಗಳೊಂದಿಗೆ ಯಾದಗಿರಿ ತಂಡವನ್ನು, ರಾಯಚೂರು ತಂಡ 10 ಅಂಕದಿಂದ ಬೆಳಗಾವಿ ತಂಡ, ಮೈಸೂರು 16 ಅಂಕದೊಂದಿಗೆ ಕೋಲಾರ ತಂಡವನ್ನು, ಕರಬೂರು ತಂಡ 16 ಅಂಕದೊಂದಿಗೆ ಬೆಂಗಳೂರು ತಂಡವನ್ನು ಮಣಿಸಿದವು.
ಕ್ರೀಡಾಕೂಟಕ್ಕೆ ಕೆರೆಗೋಡಿ ರಂಗಾಪುರದ ಗುರುಪರದೇಶಿಕೇಂದ್ರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಕುಮಾರ್, ಕರ್ನಾಟಕ ಕೊಕ್ಕೊ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್, ಅಖಿಲ ಭಾರತೀಯ ಕೊಕ್ಕೊ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಉಪಕಾರ್ ಸಿಂಗ್ ವರ್ಕ್, ಬಿ.ಸಿ.ನಾಗೇಶ್ ಸೇರಿದಂತೆ ಅನೇಕ ಗಣ್ಯರು ಜ್ಯೋತಿ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿದರು.
ಬೆಂಗಳೂರು ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್ ಸುಂದರ್‌ರಾಜ್ ಅರಸ್, ಅರ್ಜುನ ಪ್ರಶಸ್ತಿ ವಿಜೇತ ಶುಭಾನಾರಾಯಣ್, ನವೀನ್, ಕಿರಣ್, ರಾಮ್‌ಮೋಹನ್, ಸೊಪ್ಪುಗಣೇಶ್, ಶಶಿರಣ್ ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
ನಾಲ್ಕು ದಿನವು ಎಂಟರಿಂದ ಒಂಬತ್ತು ಸಾವಿರ ಕ್ರೀಡಾಪಟುಗಳಿಗೆ, ಅಧಿಕಾರಿಗಳಿಗೆ ಮೂರು ಅವಧಿಗೆ ತಿಂಡಿ, ಊಟ, ವಸತಿ ವ್ಯವಸ್ಥೆಯನ್ನು ತಿಪಟೂರು ಸ್ಪೋರ್ಟ್ಸ್ ಕ್ಲಬ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.