ADVERTISEMENT

ತುಮಕೂರು: 3 ಸಾವಿರ ನಾಯಿಗೆ ಸಂತಾನಹರಣ ಚಿಕಿತ್ಸೆ

ರೇಬಿಸ್‌ ಚುಚ್ಚು ಮದ್ದು ನೀಡಲು ಕ್ರಮ, ಖಾಸಗಿ ಸಂಸ್ಥೆಗೆ ಟೆಂಡರ್‌

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 2:29 IST
Last Updated 1 ಅಕ್ಟೋಬರ್ 2024, 2:29 IST
ತುಮಕೂರಿನಲ್ಲಿ ನಾಯಿಗಳ ಹಾವಳಿ
ತುಮಕೂರಿನಲ್ಲಿ ನಾಯಿಗಳ ಹಾವಳಿ   

ತುಮಕೂರು: ನಗರದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು, 3 ಸಾವಿರ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಮಹಾನಗರ ಪಾಲಿಕೆ ಮುಂದಾಗಿದೆ. ಕೊನೆಗೂ ಜನರ ಒತ್ತಾಯಕ್ಕೆ ಮಣಿದು ಬೀದಿ ನಾಯಿಗಳಿಗೆ ಕಡಿವಾಣ ಹಾಕುವ ಪ್ರಯತ್ನಕ್ಕೆ ಕೈ ಹಾಕಿದೆ.

4 ತಂಡಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ನಾಯಿಗಳಿಂದ ಮಕ್ಕಳು, ವೃದ್ಧರು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಹಲವು ವಾರ್ಡ್‍ಗಳಲ್ಲಿ ನಾಯಿ ಕಡಿತದಿಂದ ಮಕ್ಕಳು ಆಸ್ಪತ್ರೆ ಸೇರಿದ್ದಾರೆ. ಕೈಯಲ್ಲಿ ಕೋಲು ಹಿಡಿದು ಮನೆಯಿಂದ ಹೊರ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದ್ದಾರೆ.

ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಹಲವು ಬಾರಿ ಟೆಂಡರ್‌ ಕರೆದರೂ ಯಾರು ಮುಂದೆ ಬಂದಿರಲಿಲ್ಲ. ಆದರೆ ಇದೀಗ ‘ಆಸ್ರಾ’ ಎಂಬ ಪ್ರಾಣಿಗಳ ಕಲ್ಯಾಣ ಸಂಸ್ಥೆ ಶಸ್ತ್ರಚಿಕಿತ್ಸೆಯ ಗುತ್ತಿಗೆ ಪಡೆದುಕೊಂಡಿದೆ. ಸಂಸ್ಥೆಯ ನುರಿತ ವೈದ್ಯರು, ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ. ಆಕಸ್ಮಿಕವಾಗಿ ಕಚ್ಚಿದರೂ ಅಪಾಯಕಾರಿ ರೇಬಿಸ್ ಕಾಯಿಲೆ ಹರಡದಂತೆ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತಿದೆ. ಶೀಘ್ರದಲ್ಲೇ ಬೀದಿ ನಾಯಿಗಳು ನಿಯಂತ್ರಣಕ್ಕೆ ಬರಲಿವೆ ಎಂದು ಭರವಸೆ ನೀಡಿದ್ದಾರೆ.

ADVERTISEMENT

ನಾಯಿ ಉಪಟಳ: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ 35 ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಉಪಟಳ ಮಿತಿ ಮೀರಿದೆ. ಮಕ್ಕಳ ಕೈಯಲ್ಲಿ ಚಾಕೊಲೇಟ್‌ ಕಂಡರೂ ಬಿಡುತ್ತಿಲ್ಲ. ಕಚ್ಚಲು ಎರಗುತ್ತಿವೆ. ಇನ್ನೂ ಕೆಲವು ಕಡೆಗಳಲ್ಲಿ ವಾಹನಗಳನ್ನು ಅಟ್ಟಿಸಿಕೊಂಡು ಬರುತ್ತಿವೆ. ಪ್ರಮುಖ ರಸ್ತೆಗಳಲ್ಲೇ ಹಿಂಡು ಹಿಂಡಾಗಿ ಓಡಾಡುವ ನಾಯಿಗಳಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.

ನಾಯಿ ಕಡಿತ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ. 2023ರಲ್ಲಿ ಜಿಲ್ಲೆಯಾದ್ಯಂತ 3,465 ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ ಪ್ರಾರಂಭದ 6 ತಿಂಗಳಲ್ಲೇ 3,940 ನಾಯಿ ಕಡಿತ ಪ್ರಕರಣ ವರದಿಯಾಗಿವೆ. ಜುಲೈ 14ರಂದು ಮೆಳೆಕೋಟೆ ಬಳಿ ಕೈಯಲ್ಲಿ ಚಾಕೊಲೇಟ್‌ ಹಿಡಿದು ನಿಂತಿದ್ದ ಮೂರು ವರ್ಷದ ಬಾಲಕನ ಮೇಲೆ ನಾಯಿಯೊಂದು ದಾಳಿ ನಡೆಸಿತ್ತು. ಮುಖ, ಮೂತಿ ಕಚ್ಚಿತ್ತು. ನಗರದ ಹಲವೆಡೆ ಇಂತಹ ದಾಳಿ ಸುದ್ದಿಗಳು ವರದಿಯಾಗಿದ್ದವು.

ಹಲವು ದಿನಗಳಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡದ ಕಾರಣ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಪಾಲಿಕೆಯಿಂದ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಹಲವು ಬಾರಿ ಟೆಂಡರ್‌ ಕರೆದರೂ ಯಾರೂ ಭಾಗಿಯಾಗಿರಲಿಲ್ಲ. ಕೊನೆಗೂ ಖಾಸಗಿ ಸಂಸ್ಥೆಯೊಂದು ಮುಂದೆ ಬಂದಿದೆ.

‘3 ಸಾವಿರ ನಾಯಿಗಳ ಜತೆಗೆ ಉಳಿದ ನಾಯಿಗಳ ಕಡಿವಾಣಕ್ಕೂ ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತಕ್ಕೆ ಉಚಿತವಾಗಿ ಚಿಕಿತ್ಸೆ ನೀಡಬೇಕು. ಪ್ರತಿಯೊಂದಕ್ಕೂ ಜಿಲ್ಲಾ ಆಸ್ಪತ್ರೆ ಹುಡುಕಿಕೊಂಡು ಹೋಗುವುದನ್ನು ತಪ್ಪಿಸಬೇಕು’ ಎಂದು ಶ್ರೀರಾಮನಗರದ ಮಹೇಶ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.