ADVERTISEMENT

ಸಿಬ್ಬಂದಿಯಿಲ್ಲದೆ ಸೊರಗಿದ ಆರೋಗ್ಯ ಕೇಂದ್ರ

ಸುಸಜ್ಜಿತ ಶಸ್ತ್ರಚಿಕಿತ್ಸೆ ಕೋಣೆ, ಪ್ರಯೋಗಾಲಯವಿದ್ದರೂ ನಿರ್ವಹಣೆ ಕೊರತೆ

ಗಂಗಾಧರ್ ವಿ ರೆಡ್ಡಿಹಳ್ಳಿ
Published 20 ಮಾರ್ಚ್ 2021, 4:14 IST
Last Updated 20 ಮಾರ್ಚ್ 2021, 4:14 IST
ಕೊಡಿಗೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ
ಕೊಡಿಗೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ   

ಕೊಡಿಗೇನಹಳ್ಳಿ: ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತೀಕರಿಸಲು ಸರ್ಕಾರಕ್ಕೆ ಇನ್ನೆಷ್ಟು ವರ್ಷಗಳು ಬೇಕು. ಜನರಿಗೆ ಆರೋಗ್ಯ ಹದಗೆಟ್ಟಾಗ ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ಸಿಗದೆ ಇತರೆ ಪಟ್ಟಣಗಳಿಗೆ ಎಡತಾಕುವುದು ನಿಲ್ಲುವುದೆಂದು ಎನ್ನುವುದು ಸಾರ್ವಜನಿಕರಪ್ರಶ್ನೆ.

ಕೊಡಿಗೇನಹಳ್ಳಿ ಮಧುಗಿರಿ ತಾಲ್ಲೂಕಿನಲ್ಲೇ ದೊಡ್ಡ ಹೋಬಳಿ ಕೇಂದ್ರ. ಅತ್ಯಂತ ಹಿಂದುಳಿದ ಪ್ರದೇಶದ ಜೊತೆಗೆ ಗಡಿಭಾಗದಲ್ಲಿದೆ. ಮಧುಗಿರಿ, ಗೌರಿಬಿದನೂರು ಮತ್ತು ಆಂಧ್ರಪ್ರದೇಶದ ಹಿಂದೂಪುರ ತಾಲ್ಲೂಕುಗಳಿಗೆ ಮಧ್ಯಭಾಗದಲ್ಲಿದೆ ಆದಾಗ್ಯೂ ಉತ್ತಮ ಆರೋಗ್ಯ ಸೌಲಭ್ಯಗಳಿಲ್ಲ ಎನ್ನುವುದು ಸ್ಥಳೀಯರ ಆರೋಪ.
2017ರಲ್ಲಿ ಆಸ್ಪತ್ರೆಗೆ ನಗುಮಗು ವಾಹನ ಬಂದಿತ್ತು. ನೆಪ ಮಾತ್ರಕ್ಕೆ ವಾಹನವೇನೋ ಬಂತು ಆದರೆ ಇಲ್ಲಿನ ಜನರ ಬಹುಬೇಡಿಕೆಯಾಗಿರುವ ಉನ್ನತೀಕರಿಸಿದ ಆಸ್ಪತ್ರೆ, 108 ಆ್ಯಂಬುಲೆನ್ಸ್‌, ಕಾಯಂ ವೈದ್ಯರು, ಅದಕ್ಕೆ ತಕ್ಕಂತೆ ಸಿಬ್ಬಂದಿ ವ್ಯವಸ್ಥೆ ಇಲ್ಲ.

ಆಸ್ಪತ್ರೆಯಲ್ಲಿ ಸುಸಜ್ಜಿತ ಶಸ್ತ್ರ ಚಿಕಿತ್ಸೆ ಕೋಣೆ, ಪ್ರಯೋಗಾಲಯ, ಪ್ರತ್ಯೇಕ ಕೋಣೆ, ಸಿಸಿ ಟಿವಿ ಕ್ಯಾಮೆರಾ ಜೊತೆಗೆ ಪ್ರತ್ಯೇಕ ಹೆರಿಗೆ ಕೋಣೆ ಸೌಕರ್ಯವಿದೆ. ಆದರೆ ನಿರ್ವಹಣೆ ಕೊರೆತೆ ಮತ್ತು ಇಲ್ಲಿ ವೈದ್ಯರು ಕೇವಲ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯನಿ ರ್ವಹಿಸುವುದರಿಂದ ರೋಗಿಗಳು ಇಲ್ಲಿಗೆ ಬಾರದಂತಾಗಿದೆ. ಈ ಆಸ್ಪತ್ರೆ ವರ್ಷದಿಂದ ವರ್ಷಕ್ಕೆ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಾಗಿದೆ. ಇಂತಹ ಸಂದರ್ಭದಲ್ಲಿ ಶ್ರೀಮಂತರು ದೂರದ ಆಸ್ಪತ್ರೆಗಳತ್ತ ಮುಖ ಮಾಡಿದರೆ, ಬಡವರು ಸಮೀಪದ ಸಣ್ಣ ಪುಟ್ಟ ಆಸ್ಪತ್ರೆಗಳಿಗೆ ತೆರಳುವಂತಾಗಿದೆ.

ADVERTISEMENT

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ 24x7 ವೈದ್ಯರು, 108 ಆ್ಯಂಬುಲೆನ್ಸ್ ಸೇವೆ, ಮಹಿಳಾ ವೈದ್ಯರು, ಶಸ್ತ್ರಚಿಕಿತ್ಸೆ ಮಾಡಲು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎನ್ನುವುದು ಈ ಭಾಗದ ಜನರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.