ಕೊಡಿಗೇನಹಳ್ಳಿ: ಶಾಲೆಯಲ್ಲಿ ಪರೀಕ್ಷೆ ಮುಗಿಸಿಕೊಂಡು ಮಂಗಳವಾರ ಸಮೀಪದ ಜಯಮಂಗಲಿ ನದಿಯಲ್ಲಿ ಈಜಾಡಲು ತೆರಳಿದ್ದ ಹರ್ಷವರ್ಧನ (14) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹೋಬಳಿಯ ರಂಗನಹಳ್ಳಿ ಗ್ರಾಮದ ದೇವರಾಜು ಅವರ ಮಗ ಹರ್ವವರ್ದನ ಕೊಡಿಗೇನಹಳ್ಳಿ ಸರ್ವೋದಯ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿದ್ದ.
ಮಂಗಳವಾರ ಶಾಲೆಯಲ್ಲಿ ನಡೆದ ಚಿತ್ರಕಲೆ ಪರೀಕ್ಷೆಗೆ ಹಾಜರಾಗಿ ಮಧ್ಯಾಹ್ನ 1.30ಕ್ಕೆ ಶಾಲೆ ಬಿಟ್ಟ ನಂತರ ಸ್ನೇಹಿತರ ಜೊತೆಗೂಡಿ ಜಯಮಂಗಲಿ ಸಮೀಪದಲ್ಲಿರುವ ಸುಮಾರು 15ರಿಂದ 20 ಅಡಿ ಆಳದ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಪೋಷಕರ ಆಕ್ರಂದನ: ಹರ್ಷವರ್ಧನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ನ್ಯಾಯ ಒದಗಿಸಬೇಕು ಎಂದು ಪೊಲೀಸರನ್ನು ಒತ್ತಾಯಿಸಿದರು.
ಸಾರ್ವಜನಿಕರ ಆಕ್ರೋಶ: ಹಿಂದೆ ಇಲ್ಲಿ ಕೆಲ ಮರಳು ದಂಧೆಕೋರರು ಮರಳು ತುಂಬಲು ಆಳವಾದ ಗುಂಡಿಗಳನ್ನು ತೆಗೆದ ಪರಿಣಾಮ ಅವು 15ರಿಂದ 20 ಅಡಿಯಷ್ಟು ಆಳವಾದ ಗುಂಡಿಗಳಾಗಿದ್ದವು. ಅಪರೂಪಕ್ಕೆ ನದಿ ಹರಿದಾಗ ಗುಂಡಿಯಲ್ಲಿ ನೀರು ನಿಲ್ಲುವಂತಾಗಿದೆ. ಈಗ ಬಿಸಿಲಿಗೆ ಕೆಲ ವಿದ್ಯಾರ್ಥಿಗಳು ನೀರು ಹಾಗೂ ಗುಂಡಿಯ ಆಳ ತಿಳಿಯದೆ ನೀರಿನಲ್ಲಿ ಮುಳುಗಿ ಸಾಯುವಂತಾಗಿದೆ. ನದಿಯಲ್ಲಿ ಆಳವಾದ ಗುಂಡಿಗಳನ್ನು ತೆಗೆಯದಂತೆ ಎಚ್ಚರವಹಿಸಬೇಕು ಎಂದು ಜನರು ಒತ್ತಾಯಿಸಿದರು.
ಸ್ಥಳಕ್ಕೆ ಪಿಎಸ್‌ಐ ಶ್ರೀನಿವಾಸ್ ಪ್ರಸಾದ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.