ADVERTISEMENT

ಸುಳ್ಳು ಜಾತಿ ಪತ್ರ: ಎಂಜಿನಿಯರ್, ತಹಶೀಲ್ದಾರ್ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 6:22 IST
Last Updated 17 ಏಪ್ರಿಲ್ 2024, 6:22 IST

ತುಮಕೂರು: ಸುಳ್ಳು ದಾಖಲೆ ಸಲ್ಲಿಸಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದ ಎಂಜಿನಿಯರ್‌, ಪ್ರಮಾಣಪತ್ರ ಮಾಡಿಕೊಟ್ಟ ನಿವೃತ್ತ ತಹಶೀಲ್ದಾರ್‌ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ತುಮಕೂರು ಘಟಕದ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಪಿ.ಎನ್‌.ಮಂಜುಳಾ ಅವರು ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಲ್ಲಿ ಸಹಾಯಕ ಎಂಜಿನಿಯರಾಗಿ ಕೆಲಸ ಮಾಡುತ್ತಿರುವ ಟಿ.ಎಂ.ತಾರಾ, ಪ್ರಮಾಣ ಪತ್ರ ವಿತರಣೆ ಮಾಡಿದ ತುಮಕೂರಿನ ನಿವೃತ್ತ ತಹಶೀಲ್ದಾರ್‌ ಬಿ.ಅಹೋಬಲಯ್ಯ, ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಜಯಪ್ರಕಾಶ್‌ ನಾರಾಯಣ್‌, ನಿವೃತ್ತ ಗ್ರಾಮ ಲೆಕ್ಕಿಗ ಸಿದ್ದಲಿಂಗಪ್ಪ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ, ಕಲಂ 109, 196, 197 ಸೇರಿದಂತೆ ಇತರೆ ಕಲಂ ನಡಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ತಾರಾ ಅವರು ನಗರದ ವಿನೋಬ ನಗರದ ನಿವಾಸಿ. ‘ಗೌಂಡರ್‌’ ಜಾತಿಗೆ ಸೇರಿದ್ದು, ಪರಿಶಿಷ್ಟ ಜಾತಿಯ ಸೌಲಭ್ಯ ಪಡೆಯುವ ಉದ್ದೇಶದಿಂದ ತಾಲ್ಲೂಕು ಕಚೇರಿಗೆ ಸುಳ್ಳು ದಾಖಲೆ ಸಲ್ಲಿಸಿ 2010ರ ಆ. 13ರಂದು ‘ಆದಿ ಕರ್ನಾಟಕ’ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಿಂದ ಈ ಕುರಿತು ತನಿಖೆ ನಡೆದಿತ್ತು. ತನಿಖೆಯ ಸಮಯದಲ್ಲಿ ತಾರಾ ಸುಳ್ಳು ಪ್ರಮಾಣ ಪತ್ರ ಪಡೆದಿದ್ದು ದೃಢಪಟ್ಟಿದೆ ಎಂದು ಪಿ.ಎನ್‌.ಮಂಜುಳಾ ದೂರಿನಲ್ಲಿ ತಿಳಿಸಿದ್ದಾರೆ.

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರ, ಪರಿಶಿಷ್ಟ ಜಾತಿಯವರಿಗೆ ವಂಚಿಸಿದ್ದಾರೆ. ಅವರು ಪಡೆದುಕೊಂಡಿದ್ದ ಜಾತಿ ಪ್ರಮಾಣ ಪತ್ರ ರದ್ದುಗೊಳಿಸುವಂತೆ ಉಪವಿಭಾಗಾಧಿಕಾರಿಗೆ ತಿಳಿಸಲಾಗಿದೆ. ಜಾತಿ ಪ್ರಮಾಣ ಪತ್ರ ವಿತರಣೆ ಮಾಡಿರುವ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮಿನಲ್‌ ಪ್ರಕರಣ ದಾಖಲಿಸುವಂತೆ ಮೇಲಧಿಕಾರಿಗಳು ಸೂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.