ADVERTISEMENT

ವಿಧಾನ ಪರಿಷತ್ ಚುನಾವಣೆ: ತುಮಕೂರಲ್ಲಿ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ ಕಣಕ್ಕೆ

ಕೆ.ಜೆ.ಮರಿಯಪ್ಪ
Published 21 ನವೆಂಬರ್ 2021, 4:24 IST
Last Updated 21 ನವೆಂಬರ್ 2021, 4:24 IST
ಎನ್.ಲೋಕೇಶ್
ಎನ್.ಲೋಕೇಶ್   

ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಟಿಕೆಟ್ ಕೇಳಿದ್ದ ಸ್ಥಳೀಯರನ್ನು ಬಿಟ್ಟು, ಅಚ್ಚರಿ ಎಂಬಂತೆ ಹೊರಗಿನ ಅಭ್ಯರ್ಥಿಯನ್ನು ಬಿಜೆಪಿ ವರಿಷ್ಠರು ಕಣಕ್ಕಿಳಿಸಿದ್ದಾರೆ.

ಬೆಂಗಳೂರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ, ಬಿಬಿಎಂಪಿ ಮಾಜಿ ಸದಸ್ಯ ಎನ್.ಲೋಕೇಶ್ ಹೆಸರು ಪ್ರಕಟಿಸುವ ಮೂಲಕ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ‘ಸಂದೇಶ’ ರವಾನಿಸಿದ್ದಾರೆ.

ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸ್ಥಳೀಯ ಮುಖಂಡರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಜಿಲ್ಲೆಯ ನಾಯಕರು ಪಟ್ಟು ಹಿಡಿದಿದ್ದರು. ಡಾ.ಎಂ.ಆರ್.ಹುಲಿನಾಯ್ಕರ್ ಅಥವಾ ಕುಣಿಗಲ್ ಉದ್ಯಮಿ ರಾಜೇಶ್‌ಗೌಡ ಅವರಲ್ಲಿ ಒಬ್ಬರಿಗೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದರು. ‘ಸಮರ್ಥ’ರ ಹುಡುಕಾಟದಲ್ಲಿ ಎನ್.ಲೋಕೇಶ್ ಹೆಸರು ಪ್ರಸ್ತಾಪವಾಗಿತ್ತು.

ADVERTISEMENT

ಇದೇ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಿ.ಸುರೇಶ್‌ಗೌಡ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿದೆ. ಸಂಸದ ಜಿ.ಎಸ್.ಬಸವರಾಜು ಸಹ ತಮ್ಮನ್ನು ಯಾವುದೇ ವಿಚಾರದಲ್ಲೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ಪಕ್ಷ ಹಾಗೂ ಜಿಲ್ಲೆಯಲ್ಲಿ ಹಿರಿಯ ರಾಜಕಾರಣಿಯಾಗಿದ್ದರೂ ತಮ್ಮ ಸಲಹೆಗಳಿಗೆ ಬೆಲೆ ಇಲ್ಲವಾಗಿದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಮಯದಲ್ಲಿ ನಿರ್ಲಕ್ಷ್ಯಿಸಲಾಗುತ್ತಿದೆ ಎಂಬ ಭಾವನೆ ಮೂಡಿದೆ.

ಜನಸ್ವರಾಜ್ ಯಾತ್ರೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲೂ ಕೆಲವೊತ್ತು ಹಾಜರಿ ಹಾಕಿ, ಸಭೆಯಿಂದ ಹೊರ ನಡೆದರು. ಮುಖಂಡರೊಬ್ಬರ ಮನೆಯಲ್ಲಿ ಆರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ತೆರಳಿದರು ಎಂದು ಹೇಳಲಾಗುತ್ತಿದೆ. ಆದರೆ ಪರಿಷತ್ ಪ್ರಚಾರ ಕಾರ್ಯದಂತಹ ಪ್ರಮುಖ ವಿಚಾರಕ್ಕಿಂತ ಆರಾಧನೆಗೆ ಹೋಗುವುದು ದೊಡ್ಡ ವಿಚಾರವಲ್ಲ. ಕಾರ್ಯಕ್ರಮ ಮುಗಿದ ನಂತರ ಬೇಕಿದ್ದರೆ ಹೋಗಬಹುದಿತ್ತು. ವೇದಿಕೆಗೆ ಬಂದು ಕೆಲ ಹೊತ್ತು ಕುಳಿತಿದ್ದು, ಮಧ್ಯದಲ್ಲಿ ತೆರಳುವ ಮೂಲಕ ತಮ್ಮ ಸಿಟ್ಟನ್ನು ಪರೋಕ್ಷವಾಗಿ ತೋರ್ಪಡಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಟಿಕೆಟ್ ಹಂಚಿಕೆ ವಿಚಾರದಲ್ಲಿ ಮಾಧುಸ್ವಾಮಿ ಹಾಗೂ ಸುರೇಶ್‌ಗೌಡ ನಡುವಿನ ಭಿನ್ನಮತ ಜೋರಾಗಿಯೇ ಕಂಡು ಬಂದಿದೆ. ಕುಣಿಗಲ್‌ನ ರಾಜೇಶ್‌ಗೌಡಗೆ ಟಿಕೆಟ್ ಕೊಡಿಸಲು ಸುರೇಶ್‌ಗೌಡ ಪ್ರಯತ್ನ ನಡೆಸಿದ್ದರು. ಪಕ್ಷದ ಹಿರಿಯರು ಹೇಳಿದರು ಎಂಬ ಕಾರಣಕ್ಕೆ ಲೋಕೇಶ್ ಪರವಾಗಿ ಮಧುಸ್ವಾಮಿ ವಕಾಲತ್ತು ವಹಿಸಿದ್ದರು.ಈಗ ಪರಿಷತ್ ಚುನಾವಣೆ ಉಸ್ತುವರಿಯನ್ನು ಸಚಿವರಿಗೆ ನೀಡಲಾಗಿದೆ. ಈವರೆಗೆ ಚುನಾವಣೆ ಉಸ್ತುವಾರಿಯನ್ನು ಜಿಲ್ಲಾ ಅಧ್ಯಕ್ಷರಾಗಿದ್ದ ಸುರೇಶ್‌ಗೌಡ ನಿರ್ವಹಿಸಿಕೊಂಡು ಬಂದಿದ್ದರು. ವಿಧಾನ ಪರಿಷತ್, ಶಿರಾ ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದರು. ಪ್ರಸ್ತುತ ಅಂತಹ ಅವಕಾಶಗಳು ಇಲ್ಲವಾಗಿವೆ.

ಪಕ್ಷದ ಆಂತರಿಕ ವಿಚಾರ, ಮದಲೂರು ಕೆರೆಗೆ ನೀರು ಹರಿಸುವುದು, ಹೇಮಾವತಿ ನೀರಿನ ವಿಚಾರದಲ್ಲಿ ಸಚಿವರ ಜತೆ ಸುರೇಶ್‌ಗೌಡ ಅವರಿಗೆ ಸಂಘರ್ಷ ಉಂಟಾಗಿತ್ತು. ಭಿನ್ನಾಭಿಪ್ರಾಯ ತೀವ್ರ ಸ್ವರೂಪ ಪಡೆದುಕೊಂಡ ನಂತರ ವರಿಷ್ಠರ ಸೂಚನೆಮೇರೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪರಿಷತ್ ಚುನಾವಣೆ ಸಮಯದಲ್ಲಿ ಅಸಮಾಧಾನ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜನಸ್ವರಾಜ್ ಕಾರ್ಯಕ್ರಮದಿಂದ ದೂರ ಉಳಿದು ‘ನನ್ನನ್ನು ಬಿಟ್ಟು ಹೇಗೆ ಚುನಾವಣೆ ಮಾಡುತ್ತೀರಿ’ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಗರು ಗ್ರಾಮ ಪಂಚಾಯಿತಿಗೆ ಆಯ್ಕೆ ಆಗಿದ್ದಾರೆ. ಇಲ್ಲಿಂದಲೇ ಹೆಚ್ಚಿನ ಸಂಖ್ಯೆಯ ಮತಗಳು ಪಕ್ಷದ ಅಭ್ಯರ್ಥಿಗೆ ಬರಬೇಕಿದೆ. ಸುರೇಶ್‌ಗೌಡ
ಅವರನ್ನು ಬಿಟ್ಟು ಚುನಾವಣೆ ಎದುರಿಸುವ ಶಕ್ತಿ ಇಲ್ಲವಾಗಿದೆ. ಒಂದು ರೀತಿಯಲ್ಲಿ ಪಕ್ಷದ ನಾಯಕರಿಗೆ ಬಿಸಿ ತುಪ್ಪವಾಗಿದ್ದಾರೆ. ‘ಬಿಸಿ’ಯನ್ನು ಹೇಗೆ ತಣ್ಣಗೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.