ADVERTISEMENT

ತಿಪಟೂರು| ಹಿಂದೂ ಧರ್ಮದ ಮಹತ್ವ ಸಾರಿದ ವೀರ ಸನ್ಯಾಸಿ: ತದ್ಯುಕ್ತಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 4:53 IST
Last Updated 13 ಜನವರಿ 2026, 4:53 IST
ತಿಪಟೂರು ನಗರದ ಎಸ್‌ವಿಪಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು
ತಿಪಟೂರು ನಗರದ ಎಸ್‌ವಿಪಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು   

ತಿಪಟೂರು: ನಗರದ ಎಸ್‌ವಿಪಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಯುವ ದಿನೋತ್ಸವ ಹಾಗೂ ವಿವೇಕ ಸಿಂಚನ ಕಾರ್ಯಕ್ರಮ ಮಂಗಳವಾರ ನಡೆಯಿತು.

ತುರುವೇಕೆರೆ ರಾಮಕೃಷ್ಣಾಶ್ರಮದ ತದ್ಯುಕ್ತಾನಂದ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಹಿಂದೂ ಧರ್ಮದ ಸಂಸ್ಕೃತಿ ಹಾಗೂ ಧರ್ಮತತ್ತ್ವಗಳ ಮಹತ್ವವನ್ನು ಮನವರಿಕೆ ಮಾಡಿಕೊಟ್ಟ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಎಂದರು.

ವಿವೇಕಾನಂದರು ಚಿಕ್ಕ ವಯಸ್ಸಿನಲ್ಲಿಯೇ ಲೋಕ ಶಿಕ್ಷಣ ಹಾಗೂ ಪಠ್ಯ ಶಿಕ್ಷಣದಲ್ಲಿ ಅಪಾರ ಜ್ಞಾನ ಸಂಪಾದನೆ ಪಡೆದು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಸಂಚರಿಸಿ ಪ್ರಬುದ್ಧ ಉಪನ್ಯಾಸ ನೀಡುವ ಮೂಲಕ ಸನಾತನ ಹಿಂದೂ ಧರ್ಮದ ಮಹತ್ವ ಹಾಗೂ ಯುವಶಕ್ತಿಯ ಪಾತ್ರವನ್ನು ಜಗತ್ತಿಗೆ ತಿಳಿಸಿದರು. ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ವಿಶ್ವದ ಎಲ್ಲ ಧರ್ಮಗಳ ನಡುವೆ ಭಾರತದ ಧರ್ಮ, ಸಂಸ್ಕೃತಿ ಹಾಗೂ ಪರಂಪರೆಯ ಮೌಲ್ಯವನ್ನು ಎತ್ತಿ ಹಿಡಿದು ದೇಶಕ್ಕೆ ಅಪಾರ ಗೌರವ ತಂದುಕೊಟ್ಟ ಮಹಾನ್ ಚೇತನ ಎಂದರು.

ADVERTISEMENT

ಧರ್ಮವ್ರತಾನಂದ ಸ್ವಾಮೀಜಿ ಮಾತನಾಡಿ, ವಿವೇಕ ಹಾಗೂ ಆನಂದ ಎರಡನ್ನೂ ಜನತೆಗೆ ಸಾರಿದ ಕಾರಣ ಸ್ವಾಮಿ ವಿವೇಕಾನಂದರೆಂದು ಪ್ರಸಿದ್ಧರಾದರು. ಯುವಕರು ಹಾಗೂ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಸ್ಪಷ್ಟ ಗುರಿ ಇಟ್ಟುಕೊಂಡು ಸಾಧನೆಗೆ ಸಂಕಲ್ಪ ಮಾಡಬೇಕು ಎಂದರು.

ಉಪನ್ಯಾಸಕ ಪ್ರಭಂಜನ್ ಮಾತನಾಡಿ, ಸ್ವಾಮಿ ವಿವೇಕಾನಂದರು ನಿರ್ಭಯವಾಗಿ ಜಗತ್ತಿನಾದ್ಯಂತ ಸಂಚರಿಸಿ, ತಮ್ಮ ವಿಚಾರಧಾರೆಯನ್ನು ಉಪನ್ಯಾಸ ಮಾಲಿಕೆಗಳ ಮೂಲಕ ಹರಡಿ ವಿಶ್ವಚೇತನರಾಗಿ ಮಿಂಚಿದರು ಎಂದರು.

ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ಮಾತನಾಡಿ, ಯುವಶಕ್ತಿ ದೇಶದ ಅಮೂಲ್ಯ ಆಸ್ತಿ. ಅದು ವ್ಯರ್ಥವಾಗಿ ಹರಿದುಹೋಗಬಾರದು. ಏಕಾಗ್ರತೆಯಿಂದ ದಿವ್ಯ ತೇಜಸ್ಸನ್ನು ಪಡೆದು ದೇಶಪ್ರೇಮ, ರಾಷ್ಟ್ರಾಭಿಮಾನ ಹಾಗೂ ರಾಷ್ಟ್ರೀಯ ಏಕತೆಗೆ ತೊಡಗಿಸಿಕೊಳ್ಳಬೇಕು. ಸಿಂಹದ ಧ್ವನಿ, ಗರುಡ ಬಲದೊಂದಿಗೆ ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದರು.

ಆಡಳಿತ ಮಂಡಳಿ ಸದಸ್ಯ ರೇಣು, ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.