ADVERTISEMENT

ವಿಶೇಷ ವಾರ್ಡ್‌ಗೆ ಸಿದ್ಧಗಂಗಾಶ್ರೀ ಸ್ಥಳಾಂತರ; ದರ್ಶನಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 19:45 IST
Last Updated 13 ಡಿಸೆಂಬರ್ 2018, 19:45 IST
ಡಾ.ಶಿವಕುಮಾರ ಸ್ವಾಮೀಜಿ
ಡಾ.ಶಿವಕುಮಾರ ಸ್ವಾಮೀಜಿ   

ತುಮಕೂರು: ಚೆನ್ನೈನ ಡಾ.ರೇಲಾ ಇನ್‌ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ತೀವ್ರ ನಿಗಾ ಘಟಕದಿಂದ ವಿಶೇಷ ವಾರ್ಡ್‌ಗೆ ಗುರುವಾರ ಸಂಜೆ ಸ್ಥಳಾಂತರಿಸಲಾಗಿದೆ.

‘ಸ್ವಾಮೀಜಿ ಅವರಿಗಾಗಿಯೇ ವಿಶೇಷ ವಾರ್ಡ್ ರೂಪಿಸಿದ್ದು, ತೀವ್ರ ನಿಗಾ ಘಟಕದಲ್ಲಿರುವಂತೆಯೇ ವೈದ್ಯಕೀಯ ಸುರಕ್ಷಾ ಕ್ರಮ ವ್ಯವಸ್ಥೆ ಇದೆ. ಸೋಂಕು ತಗಲುವ ಕಾರಣದಿಂದ ವಿಶೇಷ ವಾರ್ಡಿಗೂ ಭಕ್ತರು ಭೇಟಿ ಮಾಡುವುದಕ್ಕೆ ನಿರ್ಬಂಧಿಸಲಾಗಿದೆ’ ಎಂದು ಸ್ವಾಮೀಜಿ ಅವರ ಚಿಕಿತ್ಸಾ ಉಸ್ತುವಾರಿಯಲ್ಲಿರುವ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

'ಭಕ್ತರು ಸೂಕ್ಷ್ಮವಾಗಿ ಈ ವಿಷಯ ಅರ್ಥ ಮಾಡಿಕೊಂಡು ಸಹಕರಿಸಬೇಕು. ಸ್ವಾಮೀಜಿ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಬರುವುದು ಬೇಡ. ಚಿಕಿತ್ಸೆ ಪೂರ್ಣಗೊಳ್ಳುತ್ತಿದ್ದಂತೆಯೇ ಮಠಕ್ಕೆ ಬರಲಿದ್ದು, ಅಲ್ಲಿಯೇ ಭಕ್ತ ಸಮೂಹ ಭೇಟಿ ಮಾಡಿ ಆಶೀರ್ವಾದ ಪಡೆಯಬಹುದು' ಎಂದುಮಠದ ಕಿರಿಯ ಶ್ರೀಗಳಾದ ಡಾ.ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ADVERTISEMENT

‘ಸ್ವಾಮೀಜಿಯವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯ ಒಂದೆಡೆಯಾದರೆ ಮತ್ತೊಂದೆಡೆ ಅವರಿಗೆ ಈ ಹಂತದಲ್ಲಿ ಸೋಂಕು ತಗುಲಿ ಬಿಡಬಹುದಾದ ಸಾಧ್ಯತೆ ಇದೆ. ಹೀಗಾಗಿ, ಸ್ವಾಮೀಜಿ ಅವರನ್ನು ಭಕ್ತರು ಭೇಟಿ ಮಾಡುವುದಕ್ಕೆ ನಿರ್ಬಂಧ ಮುಂದುವರೆದಿದೆ’ ಎಂದು ಹೇಳಿದರು.

ಇಡ್ಲಿ ಸೇವನೆ: ‘ಸ್ವಾಮೀಜಿ ಅವರು ಎಳನೀರು, ಹಣ್ಣಿನ ರಸದ ಜೊತೆಗೆ ಗುರುವಾರ ‘ಇಡ್ಲಿ’ಯನ್ನು ಸೇವಿಸಿದ್ದಾರೆ. ಇಷ್ಟಲಿಂಗ ಪೂಜೆಯನ್ನೂ ಮಾಡಿದ್ದಾರೆ’ ಎಂದು ಡಾ.ಪರಮೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.