ADVERTISEMENT

ಮುಖ್ಯಮಂತ್ರಿ ಸ್ಥಾನ ಕುರಿತ ಚರ್ಚೆ ಅಧಿಕೃತವಲ್ಲ; ಡಾ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 10 ಮೇ 2019, 19:38 IST
Last Updated 10 ಮೇ 2019, 19:38 IST
ಡಾ.ಜಿ.ಪರಮೇಶ್ವರ
ಡಾ.ಜಿ.ಪರಮೇಶ್ವರ   

ತುಮಕೂರು: ‘ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಇದ್ದಾರೆ. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಕೆಲವರು ಹೇಳುವುದು, ಇನ್ಯಾರೊ ಮತ್ತೊಬ್ಬರು ಮುಖ್ಯಮಂತ್ರಿ ಆಗಲಿ ಎಂದು ಹೇಳಿಕೊಳ್ಳಬಹುದು. ಆದರೆ, ಅದು ಅಧಿಕೃತವಲ್ಲ. ಶಾಸಕಾಂಗ ಪಕ್ಷದಲ್ಲಿ ಶಾಸಕರು ಕೈಗೊಳ್ಳುವ ತೀರ್ಮಾನ ಮತ್ತು ಪಕ್ಷದ ವರಿಷ್ಠರ ನಿರ್ಧಾರ ಅಂತಿಮವಾದುದು’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮಗೆ ಇಷ್ಟವಾದ ಮುಖಂಡ ಮುಖ್ಯಮಂತ್ರಿಯಾಗಬೇಕು ಎಂದು ಶಾಸಕರು ಪ್ರೀತಿಯಿಂದ ಹೇಳಿಕೊಂಡರೆ ತಪ್ಪೇನಿಲ್ಲ. ಅದರೆ, ಅದು ಅಧಿಕೃತವಾಗುವುದಿಲ್ಲ’ ಎಂದು ತಿಳಿಸಿದರು.

ಉಪಚುನಾವಣೆ ನಡೆಯುತ್ತಿರುವ ಚಿಂಚೋಳಿ ಕ್ಷೇತ್ರದ ಉಸ್ತುವಾರಿ ನಾನೇ ಆಗಿದ್ದು, ಆ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಆ ಕ್ಷೇತ್ರದ ಜನರು ಉಮೇಶ್ ಜಾಧವ್‌ಗೆ 2 ಬಾರಿ ಆಯ್ಕೆ ಮಾಡಿದ್ದರು. ಆದರೂ ರಾಜೀನಾಮೆ ಕೊಟ್ಟಿದ್ದು ಅಲ್ಲಿನ ಜನರಿಗೆ ಅಚ್ಚರಿ ಮೂಡಿಸಿದೆ. ಹಣ ಪಡೆದು ಬೇರೆ ಪಕ್ಷಕ್ಕೆ ಹೋಗಿದ್ದಾರೆ ಎಂದು ಜನ ದೂರುತ್ತಿದ್ದಾರೆ ಎಂದು ಹೇಳಿದರು.

ADVERTISEMENT

‘ಕುಂದಗೋಳ ಕ್ಷೇತ್ರ ಮೊದಲಿನಿಂದಲೂ ನಮ್ಮ ಪಕ್ಷದ ತೆಕ್ಕೆಯಲ್ಲಿರುವ ಕ್ಷೇತ್ರ. ಆ ಕ್ಷೇತ್ರದಲ್ಲೂ ನಮ್ಮ ಪಕ್ಷದ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ನಾವು ಅಧಿಕಾರವಹಿಸಿಕೊಂಡಾಗಿನಿಂದಲೂ ಬಿಜೆಪಿಯವರು ಸರ್ಕಾರ ಬಿದ್ದು ಹೋಗುತ್ತೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯವರು ಹೇಳಿದ್ದಕ್ಕೆಲ್ಲ ನಾವು ಉತ್ತರ ಕೊಡುವುದಕ್ಕೆ ಸಾಧ್ಯವಿಲ್ಲ’ ಎಂದರು.

ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ: ‘ಬರ ನಿರ್ವಹಣೆಗೆ ಹಣಕಾಸಿನ ಕೊರತೆ ಇಲ್ಲ. ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಖಾತೆಗಳಿಗೆ ಹಣ ಬಿಡುಗಡೆ ಮಾಡಿದ್ದು, ಒಟ್ಟು ₹ 720 ಕೋಟಿ ಹಣ ಅವರ ಖಾತೆಯಲ್ಲಿದೆ. ಅಗತ್ಯಕ್ಕನುಗುಣವಾಗಿ ಬರಪರಿಹಾರ ಕಾರ್ಯ ಕೈಗೊಳ್ಳಲಿದ್ದಾರೆ’ ಎಂದು ಪರಮೇಶ್ವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.