ADVERTISEMENT

ಸಾಲ ತೀರಿಸಲಾಗದೆ ಅಕ್ಕನ ಮಗಳ ಮಾರಾಟ ಮಾಡಿದ್ದ ಚಿಕ್ಕಮ್ಮ!

ಆಂಧ್ರಪ್ರದೇಶದ ಹಿಂದೂಪುರದಲ್ಲಿ ಒತ್ತೆಯಾಳಾಗಿದ್ದ ಬಾಲಕಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 23:40 IST
Last Updated 11 ಜುಲೈ 2024, 23:40 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತುಮಕೂರು: ಸಾಲ ತೀರಿಸಲಾಗದೆ ಅದಕ್ಕೆ ಬದಲಾಗಿ ಮಾರಾಟ ಮಾಡಿದ್ದ ತುಮಕೂರಿನ ಬಾಲಕಿಯನ್ನು ಆಂಧ್ರಪ್ರದೇಶದ ಹಿಂದೂಪುರದಲ್ಲಿ ನಗರ ಠಾಣೆಯ ಪೊಲೀಸರು ರಕ್ಷಿಸಿ, ನಗರಕ್ಕೆ ಕರೆ ತಂದಿದ್ದಾರೆ.

ನಗರದ ಹೊರವಲಯ ದಿಬ್ಬೂರಿನ ಚೌಡಮ್ಮ ಎಂಬುವರ 11 ವರ್ಷದ ಪುತ್ರಿಯನ್ನು ರಕ್ಷಿಸಿ ಕರೆತಂದಿರುವ ಪೊಲೀಸರು ನಗರದ ಬಾಲ ಮಂದಿರದ ಸುಪರ್ದಿಗೆ ಒಪ್ಪಿಸಿದ್ದಾರೆ.

ADVERTISEMENT

ಆಂಧ್ರಪ್ರದೇಶದ ಹಿಂದೂಪುರದಲ್ಲಿ ನೆಲೆಸಿರುವ ಸಹೋದರಿ ಸುಜಾತ ಮನೆಗೆ ಚೌಡಮ್ಮ ಕೆಲ ದಿನಗಳ ಹಿಂದೆ ಮಗಳನ್ನು ಕಳಿಸಿದ್ದರು. ಶ್ರೀರಾಮುಲು ಎಂಬುವರಿಗೆ ಕೊಡಬೇಕಿದ್ದ ₹35 ಸಾವಿರ ಸಾಲದ ಬದಲಾಗಿ ಸಹೋದರಿಯ ಮಗಳನ್ನು ಸುಜಾತಾ ಮಾರಾಟ ಮಾಡಿದ್ದರು.

ಬಾಲಕಿಯನ್ನು ಕರೆದೊಯ್ದ ಶ್ರೀರಾಮುಲು ಬಾತುಕೋಳಿ ಮೇಯಿಸಲು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ವಿಷಯ ತಿಳಿದ ಚೌಡಮ್ಮ ಹಿಂದೂಪುರಕ್ಕೆ ತೆರಳಿ ಮಗಳನ್ನು ತನ್ನೊಂದಿಗೆ ಕಳುಹಿಸುವಂತೆ ಬೇಡಿಕೊಂಡಿದ್ದರು. ಆದರೆ, ಶ್ರೀರಾಮುಲು ಒಪ್ಪಿರಲಿಲ್ಲ. ಬಾಲಕಿಯನ್ನು ತಾನು ಖರೀದಿಸಿದ್ದು, ಸಾಲದ ಹಣ ಕೊಟ್ಟು ಕರೆದುಕೊಂಡು ಹೋಗುವಂತೆ ಹೇಳಿದ್ದರು ಎನ್ನಲಾಗಿದೆ.  

‘ನನ್ನ ಮಗಳನ್ನು ಹಿಂದೂಪುರದ ಶ್ರೀರಾಮುಲು ಎಂಬುವರು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಒತ್ತೆಯಾಳಾಗಿ ದುಡಿಯುತ್ತಿರುವ ತನ್ನ ಮಗಳನ್ನು ರಕ್ಷಿಸುವಂತೆ’ ಹಿಂದೂಪುರದಿಂದ ಈಚೆಗೆ ಮರಳಿದ್ದ ಚೌಡಮ್ಮ, ತುಮಕೂರು ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ ಅವರಿಗೆ ಮನವಿ ಸಲ್ಲಿಸಿದ್ದರು.

ಕೂಡಲೇ ಕಾರ್ಮಿಕರ ಅಧಿಕಾರಿ ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಬಾಲಕಿಯನ್ನು ರಕ್ಷಿಸಿ, ಕರೆತರುವ ಜವಾಬ್ದಾರಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯು ನಗರ ಠಾಣೆ ಪೊಲೀಸರಿಗೆ ವಹಿಸಿದ್ದರು.

ದೂರು ಬಂದ ಒಂದು ವಾರದಲ್ಲೇ ಬಾಲಕಿಯನ್ನು ಪೊಲೀಸರು ರಕ್ಷಿಸಿ ಕರೆ ತಂದಿದ್ದಾರೆ ಎಂದು ಕಾರ್ಮಿಕ ಅಧಿಕಾರಿ ತೇಜಾವತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.