ಪಾವಗಡದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು.
ಪಾವಗಡ (ತುಮಕೂರು): ಸೋಲಾರ್ ಪಾರ್ಕ್ ನಿರ್ಮಾಣ, ತುಂಗಾಭದ್ರಾ ಯೋಜನೆಯಿಂದ ಕುಡಿಯುವ ನೀರು ಪೂರೈಕೆಯಿಂದ ಪಾವಗಡ ತಾಲ್ಲೂಕಿನ ಚಿತ್ರಣವೇ ಬದಲಾಗಿದ್ದು, ಅಭಿವೃದ್ಧಿಯಲ್ಲಿ ಮೇಲೇರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಾವಗಡದಲ್ಲಿ ಸೋಮವಾರ ತುಂಗಾಭದ್ರಾ ಯೋಜನೆಯಿಂದ ಕುಡಿಯುವ ನೀರು ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಿ, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಂಜುಂಡಪ್ಪ ವರದಿಯ ಅನ್ವಯ ಪಾವಗಡ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿತ್ತು. ಸೋಲಾರ್ ಪಾರ್ಕ್, ಕುಡಿಯುವ ನೀರು ಸೇರಿದಂತೆ ಸಾಕಷ್ಟು ಸೌಲಭ್ಯ ಕಲ್ಪಿಸಲಾಗಿದೆ. ಈಗ ಅಭಿವೃದ್ಧಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಇಷ್ಟೆಲ್ಲ ಅಭಿವೃದ್ಧಿ ಕೆಲಸ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ತಾಲ್ಲೂಕಿನ ಜನರು ಚಿರರುಣಿಯಾಗಿರಬೇಕು. ವಿಧಾನಸಭೆ ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬಂದಿದ್ದ ಸಮಯದಲ್ಲಿ ನೀರು ಕೊಡುವ ಭರವಸೆ ಕೊಟ್ಟಿದ್ದೆ. ಈಗ ಅದನ್ನು ಈಡೇರಿಸಿದ್ದೇನೆ. ನೀವು ಖುಷಿಪಟ್ಟರೆ, ನಾನು, ಸರ್ಕಾರ ಖುಷಿಯಾಗಿರುತ್ತೇವೆ. ಬಿಜೆಪಿ, ಜೆಡಿಎಸ್‌ನವರ ಬಣ್ಣದ ಮಾತುಗಳಿಗೆ ಬಲಿಯಾಗದೆ ಪಕ್ಷದ ಅಭ್ಯರ್ಥಿ ಪರ ನಿಲ್ಲಬೇಕು. ಮುಂದಿನ ದಿನಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಯನ್ನೇ ಬೆಂಬಲಿಸಬೇಕು’ ಎಂದು ಹೇಳುವ ಮೂಲಕ ಚುನಾವಣೆ ಭಾಷಣಕ್ಕೂ ಮುನ್ನುಡಿ ಬರೆದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಅವರ ಸರ್ಕಾರದ ಅವಧಿಯಲ್ಲಿ ಇಂತಹ ಯಾವುದಾದರೂ ಒಂದು ಯೋಜನೆ ಮಾಡಿದ್ದಾರೆಯೆ? ಹಿಂದೆ ಬಿಜೆಪಿಯವರು 9 ವರ್ಷ ಆಡಳಿತ ನಡೆಸಿದ್ದರು. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕೊಡುಗೆ ಏನು? ನಮ್ಮ ವಿರುದ್ಧ ಟೀಕೆ ಮಾಡಲು, ಸುಳ್ಳು ಹೇಳಲು ನಾಚಿಕೆ ಆಗುವುದಿಲ್ಲವೆ? ಎಂದು ಕುಟುಕಿದರು.
ಕಣ್ಣಿಗೆ ಏನಾಗಿದೆ?: ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ‘ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೆ? ನಿಮ್ಮ ಕಣ್ಣಿಗೆ ಏನಾಗಿದೆ. ಕಣ್ಣು ಕಾಣಿಸದಿದ್ದರೆ ವೈದ್ಯರ ಬಳಿ ತೋರಿಸಿಕೊಳ್ಳಿ?’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಜಲಜೀವನ್ ಮಿಷನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಶೇ 40ರಷ್ಟು ಅನುದಾನ ಕೊಡುತ್ತಿದೆ. ಉಳಿದ ಶೇ 60ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಎಲ್ಲೆಡೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೂ ಟೀಕೆ ಮಾತ್ರ ನಿಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸದ ಗೋವಿಂದ ಕಾರಜೋಳ, ‘ತಾಲ್ಲೂಕಿನ ಜನರು ಗುಳೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿ ಕೈಗಾರಿಗಳನ್ನು ಸ್ಥಾಪಿಸಬೇಕು. ಸೋಲಾರ್ ಘಟಕಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು’ ಎಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಕಾಂಕ್ ಖರ್ಗೆ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಆರ್.ರಾಜೇಂದ್ರ, ಡಿ.ಟಿ.ಶ್ರೀನಿವಾಸ್, ಮುಖಂಡರಾದ ವೆಂಕಟರಮಣಪ್ಪ, ಚಂದ್ರಶೇಖರ್‌ಗೌಡ, ಪುರಸಭೆ ಅಧ್ಯಕ್ಷ ಸುದೇಶ್‌ಬಾಬು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮೊದಲಾದವರು ಉಪಸ್ಥಿತರಿದ್ದರು.
‘ಮೈಸೂರಿನಂತೆ ನೋಡಿ’:
ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ನೀಡುವಷ್ಟೇ ಆದ್ಯತೆಯನ್ನು ತುಮಕೂರು ಜಿಲ್ಲೆಗೂ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡರು. ಬೆಂಗಳೂರಿಗೆ ತುಮಕೂರು 70 ಕಿ.ಮೀ ಅಂತರದಲ್ಲಿದೆ. ಬೆಂಗಳೂರಿನ ಒಂದು ಭಾಗವಾಗಿ ಅಭಿವೃದ್ಧಿ ಆಗಬೇಕಿದೆ. ಮೈಸೂರಿನ ಅಭಿವೃದ್ಧಿಗೆ ನೀಡಿದ ಆದ್ಯತೆಯನ್ನು ತುಮಕೂರಿಗೂ ನೀಡಬೇಕಿದೆ. ಜಿಲ್ಲೆಯ ಪ್ರಗತಿಗೆ ನಿಮ್ಮ ಸಹಕಾರ ಅತ್ಯಗತ್ಯ. ಎರಡೂ ಜಿಲ್ಲೆಗಳನ್ನು ಒಂದೇ ರೀತಿ ನೋಡಿದರೆ ಅಭಿವೃದ್ಧಿ ಕಾಣುತ್ತದೆ ಎಂದು ಹೇಳುವ ಮೂಲಕ ತಾರತಮ್ಯ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಪಾವಗಡಕ್ಕೆ ಮನೆ ಕೊಡಿ:
ಪಾವಗಡ ತಾಲ್ಲೂಕಿಗೆ ಮುಂದಿನ ದಿನಗಳಲ್ಲಿ 2 ಸಾವಿರದಿಂದ 2500 ಮನೆಗಳನ್ನು ಮಂಜೂರು ಮಾಡಿಕೊಡಬೇಕು ಎಂದು ಶಾಸಕರೂ ಆದ ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಮನವಿ ಮಾಡಿಕೊಂಡರು. ಹಿಂದಿನ ಐದು ವರ್ಷಗಳಲ್ಲಿ ತಾಲ್ಲೂಕಿಗೆ ಒಂದು ಮನೆಯನ್ನೂ ಕೊಟ್ಟಿರಲಿಲ್ಲ. ತಾಲ್ಲೂಕಿನಲ್ಲಿ ಸಾಕಷ್ಟು ಜನರಿಗೆ ಮನೆ ಅಗತ್ಯವಿದ್ದು ಮಂಜೂರು ಮಾಡಬೇಕು ಎಂದು ಕೇಳಿಕೊಂಡರು. ತಾಲ್ಲೂಕಿನಲ್ಲಿ ಹಾಸ್ಟೆಲ್ ಸೌಲಭ್ಯ ಹೆಚ್ಚಿಸಬೇಕು. ವಿದ್ಯಾಭ್ಯಾಸದ ಸಲುವಾಗಿ ತಾಲ್ಲೂಕಿನ ಮಕ್ಕಳು ತುಮಕೂರು ನಗರಕ್ಕೆ ಹೋಗುತ್ತಿದ್ದು ಅಲ್ಲಿನ ಹಾಸ್ಟೆಲ್‌ಗಳಲ್ಲಿ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಶೇ 30ರಷ್ಟು ಸ್ಥಾನ ಮೀಸಲಿಡಬೇಕು. ಕೆರೆಗಳಿಗೆ ನೀರು ತುಂಬಿಸಬೇಕು. ತುಮುಲ್ ಮೇಗಾ ಡೇರಿ ನಿರ್ಮಾಣಕ್ಕೆ ₹200 ಕೋಟಿ ನೆರವು ನೀಡಬೇಕು ಎಂದು ಒತ್ತಾಯಿಸಿದರು. ಶುದ್ಧ ಕುಡಿಯುವ ನೀರು ಕೊಡುವ ಮೂಲಕ ಫ್ಲೋರೈಡ್ ಮುಕ್ತ ತಾಲ್ಲೂಕು ಮಾಡಲಾಗಿದೆ. ಸೋಲಾರ್ ಪಾರ್ಕ್ ನಿರ್ಮಾಣದಿಂದ ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಇದರಿಂದ ಭೂಮಿಯ ಬೆಲೆ ಏರಿಕೆಯಾಗಿದೆ. ಬರಪೀಡಿತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಳಚಿ ಮುಂದುವರಿದ ಸ್ಥಿತಿಗೆ ಬಂದಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.