ADVERTISEMENT

ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ

ಶಾಂತಿಯುತವಾಗಿ ಮುಗಿದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ; ಶೇ 76ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 4:33 IST
Last Updated 29 ಅಕ್ಟೋಬರ್ 2020, 4:33 IST
ತುಮಕೂರಿನ ಬಿ.ಎಚ್‌.ರಸ್ತೆಯ ಸಿದ್ಧಗಂಗಾ ಎಲಿಮೆಂಟರಿ ಶಾಲೆ ಮತದಾನ ಕೇಂದ್ರದ ಹೊರಭಾಗದಲ್ಲಿ ನಿಂತಿದ್ದ ವಿವಿಧ ಪಕ್ಷಗಳ ಮುಖಂಡರು
ತುಮಕೂರಿನ ಬಿ.ಎಚ್‌.ರಸ್ತೆಯ ಸಿದ್ಧಗಂಗಾ ಎಲಿಮೆಂಟರಿ ಶಾಲೆ ಮತದಾನ ಕೇಂದ್ರದ ಹೊರಭಾಗದಲ್ಲಿ ನಿಂತಿದ್ದ ವಿವಿಧ ಪಕ್ಷಗಳ ಮುಖಂಡರು   

ತುಮಕೂರು: ವಿಧಾನ ಪರಿಷತ್‌ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಶೇ 76ರಷ್ಟು ಮತದಾನವಾಗಿದೆ. ಜಿಲ್ಲೆಯ ಹೋಬಳಿಗೆ ಒಂದು ಹಾಗೂ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಐದು ವಾರ್ಡ್‌ಗಳಿಗೆ ಒಂದರಂತೆ ಒಟ್ಟು 64 ಕೇಂದ್ರಗಳಲ್ಲಿ ಮತದಾರರು ಹಕ್ಕು ಚಲಾಯಿಸಿದರು. ಜಿಲ್ಲೆಯಲ್ಲಿ ಶಾಂತ ರೀತಿಯಲ್ಲಿ ಮತದಾನ ಪೂರ್ಣಗೊಂಡಿದೆ.

ಬೆಳಿಗ್ಗೆ 8ಕ್ಕೆ ಆರಂಭವಾದ ಮತದಾನ 12ರ ನಂತರ ಕಾವು ಪಡೆಯಿತು. 10ರ ವೇಳೆಗೆ ಜಿಲ್ಲೆಯಲ್ಲಿ ಶೇ 10.6ರಷ್ಟು ಮತದಾನವಾಗಿತ್ತು. ನಂತರ ಬಿಸಿಲು ಹೆಚ್ಚಿದಂತೆ ಮತದಾನವೂ ವೇಗ ಪಡೆದುಕೊಂಡಿತು.

ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು, ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ, ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ, ಪಕ್ಷೇತರ ಅಭ್ಯರ್ಥಿಗಳಾದ ಹಾಲನೂರು ಲೇಪಾಕ್ಷ, ಡಿ.ಟಿ.ಶ್ರೀನಿವಾಸ್ ಬೆಂಬಲಿಗರು ಮತದಾನ ಕೇಂದ್ರಗಳ ಹೊರಗೆ ಶಾಮಿಯಾನ ಹಾಕಿಕೊಂಡು ಮತದಾರರಿಗೆ ಚೀಟಿಗಳನ್ನು ವಿತರಿಸಿದರು. ಸ್ಥಳಕ್ಕೆ ಬಂದ ಮತದಾರರಲ್ಲಿ ನಮ್ಮ ಪಕ್ಷಕ್ಕೆ ಅಥವಾ ನಮ್ಮ ಅಭ್ಯರ್ಥಿಗೆ ಮತ ಕೊಡಿ ಎಂದು ಕೋರಿದರು. ಪಕ್ಷೇತರ ಅಭ್ಯರ್ಥಿ ಡಾ.ಕೆ.ಎಂ.ಸುರೇಶ್ ಬೆಂಬಲಿಗರ ಜತೆ ವಿವಿಧ ಮತಕೇಂದ್ರಗಳಿಗೆ ಭೇಟಿ ನೀಡಿದರು.

ADVERTISEMENT

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳ ಬೆಂಬಲಿಗರು ಮತದಾನ ಕೇಂದ್ರದ ಹೊರಗೆ ಶಾಮಿಯಾನ ಹಾಕಿ ಮತ ಕೋರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬಿ.ಎಚ್‌.ರಸ್ತೆಯ ಸಿದ್ಧಗಂಗಾ ಎಲಿಮೆಂಟರಿ ಶಾಲೆ ಬಳಿ ಬಂದ ಚಿದಾನಂದಗೌಡ, ‘ಖಂಡಿತವಾಗಿಯೂ ಗೆಲ್ಲುವ ವಿಶ್ವಾಸ ಇದೆ. ಶೇ 70ರಷ್ಟು ಮತದಾರರು ಬಿಜೆಪಿ ಬೆಂಬಲಿಸುವರು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಇದೇ ಮತಗಟ್ಟೆಗೆ ಬಂದು ಪಕ್ಷದ ಕಾರ್ಯಕರ್ತರಿಂದ ಚೌಡರೆಡ್ಡಿ ತೂಪಲ್ಲಿ ಅವರೂ ಮಾಹಿತಿ ಸಂಗ್ರಹಿಸಿದರು. ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ರಮೇಶ್ ಬಾಬು, ತುಮಕೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.