ADVERTISEMENT

ರೈತರನ್ನು ಬೀದಿಗೆ ತಂದ ಸರ್ಕಾರ: ಡಾ.ಜಿ.ಪರಮೇಶ್ವರ ಆರೋಪ

ಶಿರಾದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಆರೋಪ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 4:19 IST
Last Updated 24 ಫೆಬ್ರುವರಿ 2021, 4:19 IST
ಶಿರಾದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಸನ್ಮಾನಿಸಲಾಯಿತು
ಶಿರಾದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಸನ್ಮಾನಿಸಲಾಯಿತು   

ಶಿರಾ: ‘ರೈತರನ್ನು ಬೀದಿಗೆ ತರಲು ಯತ್ನಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಕ್ಕಪಾಠ ಕಲಿಸಬೇಕು’ ಎಂದು ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ರೈತರು ಎರಡು ತಿಂಗಳಿಂದ ಹೋರಾಟ ನಡೆಸುತ್ತಿದ್ದರು, ಸರ್ಕಾರ ಸ್ವಂದಿಸುತ್ತಿಲ್ಲ. ರೈತರ ಕಣ್ಣಿನಲ್ಲಿ ರಕ್ತ ಬರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.‌

ADVERTISEMENT

ವಿಧಾನಸಭೆ ಉಪಚುನಾವಣೆಯಲ್ಲಿ ಜಯಚಂದ್ರ ಅವರ ಸೋಲು ಸೋಲಲ್ಲ, ಬಿಜೆಪಿ ಯಾವ ರೀತಿ ಗೆದ್ದಿದೆ ಎಂದು ಎಲ್ಲರಿಗೂ ತಿಳಿದಿದೆ. ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ಬೆಂಬಲಿತರು ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ ಇಲ್ಲಿ ಕಾಂಗ್ರೆಸ್ ಸುಭದ್ರವಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ‘ರಾಜ್ಯದಲ್ಲಿ ಜಯಚಂದ್ರ ಅವರು ಮಾಡಿದಷ್ಟು ಅಭಿವೃದ್ಧಿ ಕೆಲಸಗಳನ್ನು ಬೇರೆ ಯಾರು ಮಾಡಿಲ್ಲ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಶಿರಾದಿಂದ ಜಯಚಂದ್ರ ಆಯ್ಕೆ ಅನಿವಾರ್ಯ. ಮುಂದಿನ ಚುನಾವಣೆಯಲ್ಲಿ ಅವರನ್ನು ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ’ ಎಂದರು.

ಮುಖ್ಯಮಂತ್ರಿಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಕಾಂಗ್ರೆಸ್‌ನಲ್ಲಿ ಶಾಸಕರು ಮುಖ್ತಮಂತ್ರಿಯನ್ನು ಆಯ್ಕೆ ಮಾಡುವುದಿಲ್ಲ. ಹೈಕಮಾಂಡ್ ಆಯ್ಕೆ ಮಾಡುವುದು ಎಂದರು.

ಕಲ್ಲಿನಿಂದ ಹೊಡೆಯುತ್ತಾರೆ: ಶಿರಾ ವಿಧಾನಸಭೆ ಉಪಚುನಾವಣೆ ಫಲಿತಾಂಶ ಬಂದ ನಂತರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರನ್ನು ಭೇಟಿಯಾದ ಸಮಯದಲ್ಲಿ ಫಲಿತಾಂಶದ ಬಗ್ಗೆ ಮಾತನಾಡುವಾಗ ಹಣವನ್ನು ನೀರಿನಂತೆ ಖರ್ಚು ಮಾಡಿದರೆ ಯಾರು ಗೆಲ್ಲಲು ಸಾಧ್ಯ ಎಂದಾಗ ಹಣ ಇರಲಿ ಶಿರಾ ಜನತೆಗೆ ಲೋಡುಗಟ್ಟಲೆ ಭರವಸೆ ನೀಡಲಾಗಿದೆ ನಮ್ಮಿಂದ ಅದನ್ನು ಪೂರೈಸಲು ಸಾಧ್ಯವಿಲ್ಲ. ಇನ್ನು 6 ತಿಂಗಳ ನಂತರ ಶಿರಾಕ್ಕೆ ಹೋದರೆ ಅಲ್ಲಿನ ಜನರೇ ನಮಗೆ ಕಲ್ಲಿನಿಂದ ಹೊಡೆಯುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರೇ ಹೇಳಿದ್ದಾರೆ ಎಂದರು.

ಮಾಜಿ ಸಚಿವ ಟಿ.ಬಿ‌.ಜಯಚಂದ್ರ ಮಾತನಾಡಿ, ಬಿಜೆಪಿ ಇವಿಎಂಗಳ ಮೂಲಕ ಚುನಾವಣೆ ಗೆಲುವು ಸಾಧಿಸುತ್ತಿದೆ. ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆದರೆ ಬಿಜೆಪಿ ಸೋಲು ಖಚಿತ ಇದಕ್ಕೆ ಗ್ರಾಮ ಪಂಚಾಯತಿ ಚುನಾವಣೆ ಸಾಕ್ಷಿ ಎಂದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಬೆಂಬಲಿತರನ್ನು ಸನ್ಮಾನಿಸಲಾಯಿತು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೆ.ಷಡಕ್ಷರಿ, ಷಪಿ ಅಹಮದ್, ಆರ್.ನಾರಾಯಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ಚೌದರಿ ರಂಗಪ್ಪ, ಹೊನ್ನಗಿರಿಗೌಡ, ಸಂಜಯ್ ಜಯಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬರಗೂರು ನಟರಾಜು, ಪಿ.ಆರ್.ಮಂಜುನಾಥ್, ಕಾನೂನು ಘಟಕದ ಅಧ್ಯಕ್ಷ ಎಚ್.ಗುರುಮೂರ್ತಿ, ಸತ್ಯನಾರಾಯಣ, ಜಿ.ಎಸ್.ರವಿ, ಡಿ.ಸಿ.ಆಶೋಕ್, ಶಶಿಧರ್ ಗೌಡ, ಕಲ್ಕೆರೆ ರವಿಕುಮಾರ್, ರಾಮಕೃಷ್ಣಪ್ಪ, ಶೇಷಾನಾಯ್ಕ, ಹಾರೋಗೆರೆ ಮಹೇಶ್, ಹಲುಗುಂಡೇಗೌಡ, ಗುಳಿಗೇನಹಳ್ಳಿ ನಾಗರಾಜು, ಮನು ಪಾಟೀಲ್, ರೇಖಾ ರಾಘವೇಂದ್ರ, ಮಂಜುಳಾ ಬಾಯಿ, ರಾಜಮ್ಮ, ಶೋಭಾ ನಾಗರಾಜು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.