ಕೊರಟಗೆರೆ: ಇಲ್ಲಿನ ಕೋಟೆ ಬೀದಿಯ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಾಲಯ ಉದ್ಘಾಟನೆ ಹಾಗೂ ಮೂಲ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಮೂರು ದಿನ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣ ಸೇರಿದಂತೆ ತಾಲ್ಲೂಕು, ಜಿಲ್ಲೆ ಹಾಗೂ ಬೆಂಗಳೂರಿನಿಂದ ಸಾವಿರಾರು ಭಕ್ತರು ಮಹೋತ್ಸವಕ್ಕೆ ಸಾಕ್ಷಿಯಾದರು. ಮೊದಲ ದಿನ ಗಂಗಾಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಮಹಿಳೆಯರಿಂದ ನೂರಾರು ಪೂರ್ಣಕುಂಭಗಳೊಂದಿಗೆ ದೇವಿಯ ತ್ರಿಶೂಲ ಹಾಗೂ ಕಳಶ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.
ಮೂರು ದಿನ ಪಟ್ಟಣದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಗೃಹಸಚಿವ ಜಿ. ಪರಮೇಶ್ವರ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕ ಟಿ.ಬಿ.ಜಯಚಂದ್ರ ಪಾಲ್ಗೊಂಡಿದ್ದರು.
ಮೂರನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ಧಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನವೀಕರಣಗೊಂಡ ದೇವಾಲಯಗಳು ನಮ್ಮ ಸಂಸ್ಕೃತಿಯ ಸಂಜೀವಿನಿಯಂತೆ ಭಕ್ತರಲ್ಲಿ ನಂಬಿಕೆ ತುಂಬುತ್ತವೆ. ಪಟ್ಟಣದ ಗಂಗಾಧರೇಶ್ವರ ದೇವಾಲಯ ಎತ್ತರದ ಬೆಟ್ಟದ ಮೇಲಿರುವ ಕಾರಣದಿಂದಾಗಿ ಭಕ್ತರ ಭೇಟಿ ಕಡಿಮೆ. ದೇವಾಲಯ ಹಳೆಯದಾಗಿದ್ದು, ಅದನ್ನು ಪುನರ್ ನಿರ್ಮಾಣದೊಂದಿಗೆ ಮೂಲ ಸೌಲಭ್ಯಗಳ ಅಭಿವೃದ್ಧಿ ಅಗತ್ಯವಿದೆ ಎಂದರು.
ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಕೊರಟಗೆರೆ ಪಟ್ಟಣದ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಾಲಯಗಳು ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದ ಪವಿತ್ರ ಸ್ಥಳಗಳು. ಇವು ಸಂಪೂರ್ಣ ಕಲ್ಲಿನಿಂದ ನಿರ್ಮಿತವಾಗಿರುವುದರಿಂದ ಶಾಶ್ವತತೆಯ ಸಂಕೇತವಾಗಿವೆ ಎಂದರು.
ದೇಗುಲ ಸಮಿತಿ ಅಧ್ಯಕ್ಷ ಎಡಿ ಬಲರಾಮಯ್ಯ, ಕಾರ್ಯದರ್ಶಿ ಕೆ.ವಿ. ಮಂಜುನಾಥ್, ಖಜಾಂಚಿ ಕೆ.ಎನ್. ಲಕ್ಷ್ಮಿನಾರಾಯಣ, ನಿರ್ದೇಶಕರಾದ ಮುರುಳಿ ಮೋಹನ್, ಆರ್. ರಾಜು, ಸದಸ್ಯರಾದ ಕೆ.ಬಿ.ಲೋಕೇಶ್, ಕೆ.ಆರ್.ಓಬಳರಾಜು, ಕೆ.ವಿ. ಪುರುಷೋತ್ತಮ್, ಪುನೀತ್, ನಾರಾಯಣ್, ಕೆ.ಬಿ. ಸುನಿಲ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.