ADVERTISEMENT

ಕೆಂಗಲ್‌ ಮಾಡೆಲ್‌ ಇಂದಿಗೂ ಜನಪ್ರಿಯ

ಒಕ್ಕಲಿಗರ ಕೊಡುಗೆ ಸ್ಮರಿಸಿದ ಶಾಸಕ ಡಾ.ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 6:11 IST
Last Updated 14 ಮಾರ್ಚ್ 2023, 6:11 IST
ಕೊರಟಗೆರೆಯಲ್ಲಿ ನಡೆದ ಪರಮೇಶ್ವರ ಬೆಂಬಲಿತ ಒಕ್ಕಲಿಗ ಮುಖಂಡರ ಸಭೆಯನ್ನು ಶಾಸಕ ಡಾ.ಜಿ. ಪರಮೇಶ್ವರ ಉದ್ಘಾಟಿಸಿದರು
ಕೊರಟಗೆರೆಯಲ್ಲಿ ನಡೆದ ಪರಮೇಶ್ವರ ಬೆಂಬಲಿತ ಒಕ್ಕಲಿಗ ಮುಖಂಡರ ಸಭೆಯನ್ನು ಶಾಸಕ ಡಾ.ಜಿ. ಪರಮೇಶ್ವರ ಉದ್ಘಾಟಿಸಿದರು   

ಕೊರಟಗೆರೆ: ‘ರಾಜ್ಯದ ಇತಿಹಾಸದಲ್ಲಿಯೇ ಈಗಿನ ಬಿಜೆಪಿ ರಾಜ್ಯ ಸರ್ಕಾರದಂತಹ ಭ್ರಷ್ಟ ಸರ್ಕಾರವನ್ನು ನಾನು ಎಂದಿಗೂ ಕಂಡಿಲ್ಲ’ ಎಂದು ಶಾಸಕ ಡಾ.ಜಿ. ಪರಮೇಶ್ವರ ದೂರಿದರು.

ಪಟ್ಟಣದಲ್ಲಿ ನಡೆದ ಪರಮೇಶ್ವರ ಬೆಂಬಲಿತ ಒಕ್ಕಲಿಗ ಮುಖಂಡರು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಒಂದು ಬಾರಿ ನಮ್ಮ ಕ್ಷೇತ್ರಕ್ಕೆ ದೊಡ್ಡ ಅವಕಾಶ ತಪ್ಪಿದೆ. ಮತ್ತೊಂದು ಬಾರಿ ಅಂತಹ ಅವಕಾಶ ಕ್ಷೇತ್ರದ ಜನತೆಗೆ ಒದಗಿಬಂದಿದೆ. ಅದನ್ನು ಮನಗಂಡು ಈ ಬಾರಿ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಮತದಾನ ಮಾಡಬೇಕು’ ಎಂದು ಕೋರಿದರು.

ADVERTISEMENT

ಸಂಸತ್‌ನಲ್ಲಿ ನಾಲ್ಕು ವರ್ಷದಲ್ಲಿ ಒಂದು ದಿನವೂ ಕ್ಷೇತ್ರದ ಬಗ್ಗೆ ಚಕಾರಎತ್ತದ ಸಂಸದ ಜಿ.ಎಸ್. ಬಸವರಾಜು ಹಾಗೂ ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೇನು ಲಾಭ ಎನ್ನುವ ತೇಜಸ್ವಿ ಸೂರ್ಯ ಅವರಿಂದ ಅಭಿವೃದ್ಧಿ ಮಾಡುವುದನ್ನು ನಾವು ಕಲಿಯಬೇಕಿಲ್ಲ ಎಂದರು.

‘2013ರಲ್ಲಿ ನಾನು ಸೋತೆ. ಆ ಸಮಯದಲ್ಲಿ ಜೆಡಿಎಸ್ ಶಾಸಕರಾಗಿದ್ದವರು ಕ್ಷೇತ್ರಕ್ಕೆ ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ವಿಧಾನ ಪರಿಷತ್ ಸದಸ್ಯನಾಗಿ ಸರ್ಕಾರದಲ್ಲಿ ಗೃಹ ಸಚಿವನಾದ ಮೇಲೆ ಹಾಗೂ 2018ರಲ್ಲಿ ಆಯ್ಕೆಯಾದ ನಂತರ ಏನೆಲ್ಲಾ ಶಾಶ್ವತ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುದು ಜನರಿಗೆ ತಿಳಿದಿದೆ. ಈ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿ ₹ 2,573.68 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ’ ಎಂದರು.

ಒಕ್ಕಲಿಗ ಸಮುದಾಯ ರಾಜ್ಯದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದೆ. ಇಂದಿಗೂ ದೆಹಲಿಯಲ್ಲಿ ಕೆಂಗಲ್ ಮಾಡೆಲ್ ಎಂದು ಕರ್ನಾಟಕದ ಆಡಳಿತವನ್ನು ಕರೆಯಲಾಗುತ್ತದೆ ಎಂದರು.

ಮುಖಂಡ ಪಿ.ಎನ್. ಕೃಷ್ಣಮೂರ್ತಿ ಮಾತನಾಡಿ, ‘ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಬಿಬಿಎಂಪಿ ಆಯುಕ್ತರಾಗಿದ್ದಾಗ ಹೇಗೆ ಕೆಲಸ ಮಾಡಿದರೂ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ನಮ್ಮಲ್ಲಿ ಚುನಾವಣೆ ಮಾಡಲು ಬಂದಿದ್ದಾರೆ. ಸುಧಾಕರ್ ಲಾಲ್ ಗೆದ್ದು ಐದು ವರ್ಷ ಕ್ಷೇತ್ರಕ್ಕೆ ಏನು ಕೆಲಸ ಮಾಡಿದರು? ಪರಮೇಶ್ವರ ಏನೆಲ್ಲಾ ಕೆಲಸ ಮಾಡಿದ್ದಾರೆ ಎಂಬುದನ್ನು ಜನರು ಅವಲೋಕಿಸಬೇಕಿದೆ’ ಎಂದು ಹೇಳಿದರು.

ಮುಖಂಡ ಆರ್. ಕಾಮರಾಜು, ಕೆಪಿಸಿಸಿ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಮಾತನಾಡಿದರು.

ತುಮುಲ್ ನಿರ್ದೇಶಕ ಈಶ್ವರಯ್ಯ, ಮುಖಂಡರಾದ ತುಂಬಾಡಿ ರಾಮಚಂದ್ರಪ್ಪ, ಟಿ.ಡಿ. ಪ್ರಸನ್ನಕುಮಾರ್, ಸಿದ್ದಲಿಂಗಪ್ಪ, ಗಂಗಾಧರಪ್ಪ, ಕಾಕಿಮಲ್ಲಯ್ಯ, ಜಿ.ಎಸ್. ರವಿಕುಮಾರ್, ಜಿ.ಕೆ. ಕುಮಾರ್, ಜಯಮ್ಮ, ಶೈಲಜಾ, ಜ್ಯೋತಿ, ಸ್ವಾಮಿ, ಶಿವಕುಮಾರ್, ವೆಂಕಟಪ್ಪ, ನಾಗೇಶ್ ಕುಮಾರ್, ಡಿ.ಎನ್. ರಮೇಶ್, ಪುಟ್ಟನರಸಪ್ಪ, ಕೆಂಪಣ್ಣ, ನಾಗರಾಜು, ಲಿಂಗಣ್ಣ, ರಂಗಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.