
ತುಮಕೂರು: ನಗರದ ನವೀನ್ ಎಂಬುವರು ಏಪ್ರಿಲ್ ತಿಂಗಳಲ್ಲಿ ನಿವೇಶನದ ಇ–ಖಾತಾ ಮಾಡಿಸಲು ಅರ್ಜಿ ಹಾಕಿದ್ದರು. ಡಿಸೆಂಬರ್‌ನಲ್ಲಿ ಮಹಾನಗರ ಪಾಲಿಕೆ ಕಚೇರಿಗೆ ಹೋಗಿ ವಿಚಾರಿಸಿದರೆ ಅವರ ಅರ್ಜಿಯೇ ತಿರಸ್ಕೃತವಾಗಿದೆ. ‘ಎಂ.ಎ.ಆರ್.19 ಪ್ರತಿಯಲ್ಲಿ ನಂಬರ್ ಸರಿಯಾಗಿ ಕಾಣಿಸುತ್ತಿಲ್ಲ. ಹಾಗಾಗಿ ತಿರಸ್ಕೃತವಾಗಿದೆ’ ಎನ್ನುವುದು ಪಾಲಿಕೆ ಸಿಬ್ಬಂದಿ ಉತ್ತರ.
‘ಅರ್ಜಿ ಸಲ್ಲಿಕೆಗೆ ಪಾಲಿಕೆಗೆ ಬಂದರೆ, ನಿಮ್ಮ ವ್ಯಾಪ್ತಿಯ ಕರ್ನಾಟಕ ಒನ್‌ನಲ್ಲಿಯೇ ಅರ್ಜಿ ಸ್ವೀಕರಿಸಲಾಗುತ್ತದೆ. ಅಲ್ಲಿಗೇ ಹೋಗಿ’ ಎನ್ನುತ್ತಾರೆ ಅಧಿಕಾರಿಗಳು. ಕರ್ನಾಟಕ ಒನ್‌ನಲ್ಲಿ ಸಿಬ್ಬಂದಿ ಕ್ಯಾರೇ ಎನ್ನುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ನಗರದ ನಿವಾಸಿ ಹರೀಶ್.
ಇವು ಕೆಲವು ಉದಾಹರಣೆಗಳಷ್ಟೇ. ಇದೇ ರೀತಿಯಲ್ಲಿ ನಿತ್ಯ ನೂರಾರು ಜನ ಇ–ಖಾತೆ ಮಾಡಿಸಲು ಪಾಲಿಕೆ ಕಚೇರಿಗೆ ಅಲೆಯುತ್ತಿದ್ದಾರೆ. ದಾಖಲೆ ಸಮರ್ಪಕವಾಗಿಲ್ಲ, ಸರ್ವರ್ ಸರಿ ಇಲ್ಲ ಎಂಬ ನೆಪ ಹೇಳಿ ಜನರನ್ನು ವಾಪಸ್ ಕಳುಹಿಸಲಾಗುತ್ತಿದೆ. ಕರ್ತವ್ಯಕ್ಕೆ ರಜೆ ಹಾಕಿ ಬರುವ ಉದ್ಯೋಗಿಗಳು ಬರಿಗೈನಲ್ಲಿ ವಾಪಸ್ ತೆರಳುತ್ತಿದ್ದಾರೆ. ಪಾಲಿಕೆಯ ಆಡಳಿತ ವರ್ಗಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1.30 ಲಕ್ಷ ಆಸ್ತಿಗಳಿವೆ. ಇದರಲ್ಲಿ ಇದುವರೆಗೆ 48 ಸಾವಿರ ಆಸ್ತಿಗಳಿಗೆ ಮಾತ್ರ ಇ–ಖಾತೆ ಮಾಡಿಕೊಡಲಾಗಿದೆ. ಇನ್ನೂ ಶೇ 50ರಷ್ಟು ಆಸ್ತಿಗಳಿಗೂ ಇ–ಖಾತೆ ನೀಡಲು ಸಾಧ್ಯವಾಗಿಲ್ಲ. ಜನ ಒಂದು ದಾಖಲೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಈ ಪ್ರಕ್ರಿಯೆ ಸರಳೀಕರಣಕ್ಕೆ ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ.
‘ಇ-ಖಾತೆ ಮಾಡಿಸಲು ಸಾರ್ವಜನಿಕರು ಪರದಾಡುತ್ತಿದ್ದು, ಮಹಾನಗರ ಪಾಲಿಕೆಯ ಇಡೀ ವಾತಾವರಣ ಕೆಟ್ಟು ಹೋಗಿದೆ. ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಅರ್ಜಿ ಸ್ಥಿತಿ ಏನೆಂದು ತಿಳಿಯಲು ಆಗುತ್ತಿಲ್ಲ. ತಿಂಗಳುಗಟ್ಟಲೆ ಅಲೆದಾಡಿಸಿ, ಕೊನೆಗೆ ಯಾವುದೋ ಒಂದು ದಾಖಲೆ ಸರಿ ಇಲ್ಲ ಎಂದು ಅರ್ಜಿ ತಿರಸ್ಕಾರ ಮಾಡಲಾಗುತ್ತಿದೆ’ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಹಾನಗರ ಪಾಲಿಕೆಗೆ ಭೇಟಿ ನೀಡಿ ಪರಿಶೀಲನೆಯೂ ನಡೆಸಿದ್ದರು. ಇ–ಖಾತೆ ಕಾರ್ಯಕ್ಕೆ ವೇಗ ನೀಡುವಂತೆ ಸೂಚಿಸಿದ್ದರು. ಆದರೂ ವೇಗ ಪಡೆದುಕೊಂಡಿಲ್ಲ. ಕುಂಟುತ್ತಲೇ ಸಾಗಿದೆ.
ಪಾಲಿಕೆ ಅಧಿಕಾರಿಗಳು ಯಾವ ಸೂಚನೆಯನ್ನೂ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ಖಾತೆ ಮಾಡುವ ಕೆಲಸ ಮತ್ತಷ್ಟು ತೆವಳುತ್ತಾ ಸಾಗಿದೆ. ಪಾಲಿಕೆ ಮೇಯರ್, ಸದಸ್ಯರು ಇದ್ದಿದ್ದರೆ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸುತ್ತಿದ್ದರು. ಸದಸ್ಯರ ಅಧಿಕಾರಾವಧಿ ಮುಗಿದು ಎರಡು ವರ್ಷ ಕಳೆಯುತ್ತಾ ಬರುತ್ತಿದೆ. ಕಚೇರಿ ಸಿಬ್ಬಂದಿ ತಮಗಿಷ್ಟಬಂದಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಸಾಮಾನ್ಯವಾಗಿದೆ.
ಪಾಲಿಕೆ ಆಡಳಿತ ವರ್ಗ ಗಾಢ ನಿದ್ರೆಗೆ ಜಾರಿದೆ. ಜನಪ್ರತಿನಿಧಿ, ಮೇಲಧಿಕಾರಿಗಳ ಎಚ್ಚರಿಕೆ ಕೇವಲ ‘ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಆಗಿದೆ’ ಎಂದು ನಗರದ ಬನಶಂಕರಿಯ ನರಸಿಂಹಮೂರ್ತಿ ಕಿಡಿಕಾರಿದರು.
ಜನರೇ ಅರ್ಜಿ ಸಲ್ಲಿಸಿ
ಆಸ್ತಿ ಮಾಲೀಕರು ಕಚೇರಿಗೆ ಬಂದು ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಸರ್ವರ್ ಸಮಸ್ಯೆಯಾಗಿದೆ. ಡಿ. 29ರಿಂದ ಇದು ಸರಿ ಹೋಗಲಿದೆ. ಜನರು ಇದರ ನೆರವು ಪಡೆಯಬೇಕು. ಅಗತ್ಯ ದಾಖಲೆ ಸಲ್ಲಿಸಿ ಮೊಬೈಲ್‌ನಲ್ಲಿ ಕರ್ನಾಟಕ ಒನ್‌ನಲ್ಲಿ ಅರ್ಜಿ ಸಲ್ಲಿಸಬಹುದು.– ಮನುಕುಮಾರ್, ಉಪ ಆಯುಕ್ತ ಮಹಾನಗರ ಪಾಲಿಕೆ
ಖಾತೆ ಸವಾಲು
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಇ–ಖಾತಾ ಮಾಡಿಸಲು ರಜೆ ಹಾಕಿಕೊಂಡು ಬರಬೇಕು. ಇಲ್ಲಿಗೆ ಬಂದರೆ ಯಾರೊಬ್ಬರೂ ಸರಿಯಾಗಿ ಸ್ಪಂದಿಸುವುದಿಲ್ಲ. ಎಲ್ಲ ದಾಖಲೆ ತಂದರೂ ಮತ್ತೆ ಇನ್ನೇನೋ ಕೇಳುತ್ತಾರೆ. ಇದರಿಂದ ಖಾತೆ ಮಾಡಿಸುವುದು ಸವಾಲಾಗಿದೆ.– ಹರಿ, ತುಮಕೂರು
ಸದಾ ಸರ್ವರ್ ಸಮಸ್ಯೆ
ಎರಡು–ಮೂರು ದಿನಕ್ಕೊಮ್ಮೆ ಸರ್ವರ್ ಬ್ಯುಸಿ ಎನ್ನುತ್ತಿದ್ದಾರೆ. ಇದು ಎಂತಹ ಸರ್ವರ್ ಎಂಬುವುದು ಗೊತ್ತಾಗುತ್ತಿಲ್ಲ. ಪ್ರತಿ ದಿನ ಕಚೇರಿಗೆ ಬಂದು ಹೋಗುವುದೇ ಜನರ ಕಾಯಕವಾಗಿದೆ.– ನರಸಿಂಹಯ್ಯ, ತುಮಕೂರು
ಕೆಲಸ ಮುಗಿಯುವುದು ಯಾವಾಗ?
ಇ–ಖಾತೆ ಅಷ್ಟೇ ಅಲ್ಲ. ಮಹಾನಗರ ಪಾಲಿಕೆಯಲ್ಲಿ ಯಾವ ಕೆಲಸವೂ ಸರಿಯಾಗಿ ಆಗುತ್ತಿಲ್ಲ. ಕಳೆದ ಎಂಟು–ಹತ್ತು ದಿನಗಳಿಂದ ನೆಟ್‌ವರ್ಕ್ ಬರುತ್ತಿಲ್ಲ. ಕಚೇರಿಯಲ್ಲಿ ಕೇಳಿದರೆ ನೆಟ್‌ವರ್ಕ್ ಸಮಸ್ಯೆ ಎನ್ನುತ್ತಿದ್ದಾರೆ. ಹೀಗಾದರೆ ಜನರ ಕೆಲಸ ಮುಗಿಯುವುದು ಯಾವಾಗ?– ದೊಡ್ಡಯ್ಯ, ತುಮಕೂರು
ಸಿಬ್ಬಂದಿ ಇರಲ್ಲ
ಬೆಳಿಗ್ಗೆ ಬಂದರೆ ಮಧ್ಯಾಹ್ನ ಬನ್ನಿ ಎನ್ನುತ್ತಾರೆ. ಊಟದ ನಂತರ ಕಚೇರಿ ಕಡೆಗೆ ಹೋದರೆ ಅಧಿಕಾರಿ ಇರುವುದಿಲ್ಲ. ಕೇಳಿದರೆ ಸ್ಥಳ ಪರಿಶೀಲನೆಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಇಡೀ ವ್ಯವಸ್ಥೆ ಕೆಟ್ಟು ಹೋಗಿದೆ.– ಲಕ್ಷ್ಮಿಕಾಂತ್, ಹನುಮಂತಪುರ
ನಿವೃತ್ತ ನೌಕರರೇ ಮಧ್ಯವರ್ತಿ
ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾದ ವಾಟರ್‌ಮ್ಯಾನ್ ಕರ ವಸೂಲಿಗಾರರೇ ಈಗ ಮಧ್ಯವರ್ತಿಯಾಗಿದ್ದಾರೆ. ಅವರೇ ಎಲ್ಲ ಕೆಲಸ ಮಾಡಿಸುತ್ತಾರೆ. ಅವರೇ ಮುಂದೆ ನಿಂತು ಅವರಿಗೆ ಬೇಕಾದವರಿಗೆ ಇ–ಖಾತಾ ಮಾಡಿಸಿಕೊಡುತ್ತಾರೆ. ಸಾಮಾನ್ಯ ಜನರ ಪಾಡು ಯಾರೂ ಕೇಳುವುದಿಲ್ಲ.– ಮೂರ್ತಿ, ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.