ADVERTISEMENT

ಬಹುಮುಖ ಉದ್ಯೋಗ ಸೃಷ್ಟಿಯ ನೇಕಾರಿಕೆ

ವೈ.ಎನ್.ಹೊಸಕೋಟೆ: ವನಿತೆಯರ ಆಕರ್ಷಿಸುವ ವೈವಿಧ್ಯಮಯ ರೇಷ್ಮೆ ಸೀರೆಗಳು

ನಾಗರಾಜಪ್ಪ
Published 12 ಸೆಪ್ಟೆಂಬರ್ 2020, 1:24 IST
Last Updated 12 ಸೆಪ್ಟೆಂಬರ್ 2020, 1:24 IST
ವೈ.ಎನ್.ಹೊಸಕೋಟೆಯಲ್ಲಿ ಕೈಮಗ್ಗ ನೇಕಾರರು ರೇಷ್ಮೆ ಸೀರೆಗಳನ್ನು ನೇಯ್ದರು
ವೈ.ಎನ್.ಹೊಸಕೋಟೆಯಲ್ಲಿ ಕೈಮಗ್ಗ ನೇಕಾರರು ರೇಷ್ಮೆ ಸೀರೆಗಳನ್ನು ನೇಯ್ದರು   

ವೈ.ಎನ್.ಹೊಸಕೋಟೆ: ಮಹಿಳೆಯರ ಮನಗೆಲ್ಲುವ ಅಪ್ಪಟ ರೇಷ್ಮೆ ಸೀರೆಗಳ ನೇಕಾರಿಕೆಯು ವೈ.ಎನ್.ಹೊಸ
ಕೋಟೆಯಲ್ಲಿ ಒಂದು ಉದ್ಯಮವಾಗಿ ಬೆಳೆದಿದೆ. ಜತೆಗೆ ಸುತ್ತಮುತ್ತಲಿನ ಹಳ್ಳಿಗಳಿಗೂ ಪಸರಿಸಿ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಸುಮಾರು ₹3 ಸಾವಿರದಿಂದ 20 ಸಾವಿರ ಮುಖಬೆಲೆಯ ವಿವಿಧ ಬಣ್ಣ ಮತ್ತು ವೈವಿಧ್ಯಮಯ ಸೀರೆಗಳನ್ನು ನೇಯಲಾಗುತ್ತಿದೆ. ಇವುಗಳಿಗೆ ಅಧಿಕೃತ ಬ್ರಾಂಡ್ ಇಲ್ಲದ ಕಾರಣ ಕಾಂಚಿವರಂ ಇತ್ಯಾದಿ ಬ್ರಾಂಡ್‌ಗಳ ಹೆಸರಿನಲ್ಲಿ ವ್ಯಾಪಾರಿ ಮಳಿಗೆಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ. ಗ್ರಾಹಕರು ನೇರವಾಗಿ ನೇಕಾರರಿಂದ ಕೊಂಡರೆ ಕಡಿಮೆ ಬೆಲೆಗೆ ಸೀರೆ ಲಭ್ಯವಾಗುತ್ತದೆ. ಜತೆಗೆ ನೇಕಾರರಿಗೆ ಹೆಚ್ಚು ಉಪಯೋಗವಾಗುತ್ತದೆ.

ಇಲ್ಲಿ ಸಣ್ಣಬುಟ್ಟ, ದೊಡ್ಡಬುಟ್ಟ, 16 ಬುಟ್ಟ, ಬಳ್ಳಿಬುಟ್ಟ, ಬೀಟ್ ಕಳಾಂಜಲಿ, ಪೂರ್ಣಕಳಾಂಜಲಿ, ಬ್ರೋಕೆಟ್, ಪ್ಲೈನ್, ಎರಿಬೋಸ್, ಕಂಚಿವರಂ ಕುಟ್ಟಸೀರೆ, ಮದಪಟ್ಟು ಡಿಸಿ, ಚೆಕ್ಸ್, ಕಾಂಟ್ರಾಸ್ಟ್, ಕಡಿಯಾಲು, ಲಕ್ಷದೀಪ ಇತ್ಯಾದಿ ವಿವಿಧ ಸೀರೆಗಳನ್ನು ನೇಯಲಾಗುತ್ತದೆ.

ADVERTISEMENT

ಕೈಮಗ್ಗ ನೇಕಾರಿಕೆ ಹೊರತಾದ ಪವರ್ ಲೂಮ್ಸ್‌ನಲ್ಲಿ ತಯಾರಾಗುವ ಸೀರೆಗಳು ₹1 ಸಾವಿರದಿಂದ ₹5 ಸಾವಿರವರೆಗೆ ದೊರೆಯುತ್ತವೆ. ಆದರೆ ಅವು ಅಪ್ಪಟ ರೇಷ್ಮೆಯಾಗಿರಲು ಸಾಧ್ಯವಿಲ್ಲ.

ಇಂದು ಸಾವಿರಾರು ಜನ ರೇಷ್ಮೆ ಸೀರೆ ನೇಕಾರಿಕೆ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಇದರಿಂದ ಸ್ಥಳೀಯವಾಗಿ ಬಹುಮುಖ ಉದ್ಯೋಗಗಳೂ ಸೃಷ್ಟಿಯಾಗಿವೆ. ರೇಷ್ಮೆ ಬೆಳೆಯುವ ರೈತರಿಂದ ಹಿಡಿದು ಸೀರೆ ಮಾಡುವ ವ್ಯಾಪಾರಿವರೆಗೆ ಅನೇಕ ಹಂತದ ಉದ್ಯೋಗಗಳು ಈ ಕ್ಷೇತ್ರದಲ್ಲಿ ಬರುತ್ತವೆ.

ರೇಷ್ಮೆ ಸೊಪ್ಪು ಬೆಳೆಯುವುದು, ರೇಷ್ಮೆ ಹುಳು ಸಾಕಾಣಿಕೆ, ಗೂಡಿನಿಂದ ನೂಲು ತೆಗೆಯುವುದು, ನೂಲಿನಿಂದ ಹುರಿ ಹಾಕುವುದು, ವಾರ್ಪು ಮತ್ತು ರೇಷ್ಮೆಯಾಗಿ ವಿಂಗಡಿಸಿ ಕಚ್ಚಾ ರೇಷ್ಮೆಯಾಗಿ ಪರಿವರ್ತನೆ ಮಾಡುವುದು, ಕಚ್ಚಾ ರೇಷ್ಮೆ ವ್ಯಾಪಾರ, ಕಚ್ಚಾ ರೇಷ್ಮೆಗೆ ಬಣ್ಣ ಹಾಕುವುದು, ಡೋಲಿ ಸುತ್ತುವುದು, ರೇಷ್ಮೆಯನ್ನು ಚಿಟ್ಟಿಗಳಿಂದ ತೋಡುವುದು, ಬೋಟು ಸುತ್ತುವುದು, ರೇಷ್ಮೆ ಸೀರೆಯಾಗಿ ನೇಯುವುದು ಹೀಗೆ ಪ್ರಮುಖ ಕೆಲಸಗಳು ಹುಟ್ಟಿಕೊಳ್ಳುತ್ತವೆ.

ಇವಲ್ಲದೆ ಜರಿಯ ವ್ಯಾಪಾರ, ಜರಿಯನ್ನು ತೊಡುವುದು, ಅಚ್ಚು ಕಟ್ಟುವುದು, ಜಾಕಾರ್ಡ್ ರಿಪೇರಿ, ಕಂಪ್ಯೂಟರ್ ಡಿಸೈನ್ ಸೃಷ್ಟಿಸುವುದು, ಡಿಸೈನ್ ರಟ್ಟುಗಳ ಪಂಚಿಂಗ್ ಮಾಡುವುದು, ಸೀರೆಗಳ ಫಾಲಿಶ್ ಮಾಡುವುದು, ಸೆರಗಿನ ಕುಚ್ಚು ಕಟ್ಟುವುದು ಹೀಗೆ ಹಲವಾರು ಉದ್ಯೋಗಗಳು ರೇಷ್ಮೆ ಸೀರೆ ನೇಕಾರಿಕೆಯಿಂದ ಸೃಷ್ಟಿಯಾಗಿವೆ.

ನೇಕಾರಿಕೆಯು ಪ್ರಮುಖ ಉದ್ಯೋಗವಾಗಿ ಕಂಡುಬಂದರೆ ನೇಕಾರಿಕೆ ಆಧಾರಿತವಾಗಿ ಎಲ್ಲಾ ಉಪಕಸುಬುಗಳು ಅತ್ಯಗತ್ಯವಾದವುಗಳೇ. ಹಾಗಾಗಿ ರೇಷ್ಮೆ ಸೀರೆ ನೇಕಾರಿಕೆ ಕ್ಷೇತ್ರ ಹಲವರ ದುಡಿಮೆ ದಾರಿಯಾಗಿದೆ.

ಆದರೆ, ಈಚಿನ ದಿನಗಳಲ್ಲಿ ಹಲವು ಸಮಸ್ಯೆಗಳಿಂದ ರೇಷ್ಮೆ ನೇಕಾರಿಕೆ ವೃತ್ತಿ ಸೊರಗುತ್ತಿದೆ. ನೇಕಾರರ ಕೊರತೆ, ಕಚ್ಚಾ ರೇಷ್ಮೆ ಬೆಲೆ ಏರಿಕೆ, ವ್ಯಾಪಾರ ಕುಂಠಿತ, ಬಂಡವಾಳ ಸಮಸ್ಯೆ, ಸೂಕ್ತ ತರಬೇತಿ ಕೊರತೆ, ಮಾರುಕಟ್ಟೆ ಅಲಭ್ಯ, ಪೈಪೋಟಿಯ ವ್ಯಾಪಾರ, ಬ್ರಾಂಡ್ ಇಲ್ಲದಿರುವುದು ದೊಡ್ಡ ಪೆಟ್ಟು ನೀಡಿದೆ.

‘ಸರ್ಕಾರ ಗ್ರಾಮದಲ್ಲಿ ನೇಕಾರಿಕೆ ಕ್ಲಸ್ಟರ್‌ ರೂಪಿಸಿ ಒಂದೇ ಸೂರಿನಡಿ ಎಲ್ಲ ದೊರೆಯುವಂತೆ ವ್ಯವಸ್ಥೆ ಮಾಡಿದರೆ ಗ್ರಾಮೀಣ ಪ್ರದೇಶದ ಅನೇಕ ಯುವಕರಿಗೆ ಮತ್ತು ಮಹಿಳೆಯರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಿದಂತಾಗುತ್ತದೆ’ ಎನ್ನುತ್ತಾರೆ ನೇಕಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.