
ತುಮಕೂರು: ಐಷಾರಾಮಿ ಹೋಟೆಲ್, ರೆಸ್ಟೋರೆಂಟ್, ಕ್ಯಾಂಟೀನ್, ಪಿಜಿ, ಬೀದಿಬದಿ ತಳ್ಳುವ ಗಾಡಿಯಲ್ಲಿ ಸಿಗುವ ಆಹಾರ ಸೇರಿದಂತೆ ಯಾವುದೇ ಆಹಾರದ ಗುಣಮಟ್ಟ ಪರೀಕ್ಷಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಆಹಾರ ಸೇವಿಸುವವರು ಸಹ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹಳಿ ತಪ್ಪಿದ್ದು, ನಿಗದಿತ ಗುರಿ ತಲುಪಲು ಹೆಣಗಾಡುತ್ತಿದೆ. ಪ್ರಾಧಿಕಾರಕ್ಕೆ 2024–25ನೇ ಸಾಲಿನಲ್ಲಿ 3,600 ಆಹಾರದ ಮಾದರಿ ಪರೀಕ್ಷೆಯ ಗುರಿ ನಿಗದಿ ಪಡಿಸಿದ್ದು, ಕೇವಲ 2,045 ಮಾದರಿ ಪರೀಕ್ಷಿಸಲಾಗಿದೆ. ಶೇ 56.80ರಷ್ಟು ಸಾಧನೆ ಮಾಡಿದೆ. ಪ್ರತಿ ತಾಲ್ಲೂಕಿಗೆ 5 ಕಾನೂನು ಬದ್ಧ ಮಾದರಿ, 25 ಸಮೀಕ್ಷಾ ಮಾದರಿ ಪರೀಕ್ಷೆಗೆ ಒಳಪಡಿಸುವ ಗುರಿ ನೀಡಲಾಗಿದೆ. ಆದರೆ, ಒಂದು ತಾಲ್ಲೂಕಿನಲ್ಲಿ ಕೂಡ ಈ ಗುರಿ ತಲುಪಲು ಸಾಧ್ಯವಾಗಿಲ್ಲ.
361 ಕಾನೂನು ಬದ್ಧ ಮಾದರಿ, 1,684 ಸಮೀಕ್ಷಾ ಮಾದರಿ ಸೇರಿ ಒಟ್ಟು 2,045 ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 2 ಮಾದರಿಗಳು ಅಸುರಕ್ಷಿತ ಎಂಬುದು ಪರೀಕ್ಷೆಯಿಂದ ಗೊತ್ತಾಗಿದೆ. ಶಿರಾದಲ್ಲಿ ಕೇವಲ ಒಂದು ಕಾನೂನು ಬದ್ಧ ಮಾದರಿ, ಕೊರಟಗೆರೆಯ 3 ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವರ್ಷಕ್ಕೆ 311 ಆಹಾರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆಹಾರ ಸುರಕ್ಷತೆ ಅಧಿಕಾರಿಗಳ ಕೊರತೆಯಿಂದಾಗಿ ಪ್ರಾಧಿಕಾರದಲ್ಲಿ ಯಾವುದೇ ಕೆಲಸ ವೇಗ ಪಡೆಯುತ್ತಿಲ್ಲ.
80 ಪ್ರಕರಣ: ಅಸುರಕ್ಷಿತ ಆಹಾರ ಮಾರಾಟ ಮಾಡುತ್ತಿದ್ದ ಹೋಟೆಲ್, ಬೇಕರಿ, ಅಂಗಡಿ ಮಳಿಗೆಗಳನ್ನು ಗುರುತಿಸಿ ಪ್ರಕರಣ ದಾಖಲಿಸಲಾಗಿದೆ. 2013ರಿಂದ 2025ರ ವರೆಗೆ ಇಂತಹ ಒಟ್ಟು 80 ಪ್ರಕರಣಗಳು ವರದಿಯಾಗಿವೆ. ಜೆಎಂಎಫ್‌ಸಿ ನ್ಯಾಯಾಲಯ, ಹೆಚ್ಚುವರಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ಇದೇ ಅವಧಿಯಲ್ಲಿ ಒಟ್ಟು ₹5.76 ಲಕ್ಷ ದಂಡ ವಿಧಿಸಲಾಗಿದೆ. ಪರೀಕ್ಷೆಗೆ ಒಳಪಡಿಸಿದ ಮಾದರಿಗಳ ಪೈಕಿ 31 ಮಾದರಿಗಳು ಅಸುರಕ್ಷಿತ ಎಂಬುವುದು ಗೊತ್ತಾಗಿದೆ. 49 ಮಾದರಿಗಳು ಯೋಗ್ಯವಾಗಿದ್ದರೂ, ಗುಣಮಟ್ಟದಿಂದ ಕೂಡಿಲ್ಲ ಎಂಬುವುದು ಪರೀಕ್ಷೆಯಿಂದ ತಿಳಿದು ಬಂದಿದೆ. ಆಹಾರದ ಗುಣಮಟ್ಟದ ಕುರಿತು ಗಮನ ಹರಿಸುವಂತೆ ಪ್ರಾಧಿಕಾರದಿಂದ ನೋಟಿಸ್ ಜಾರಿ ಮಾಡಲಾಗಿದೆ.
‘ಸಾರ್ವಜನಿಕರು ಪ್ರತಿ ನಿತ್ಯ ಹೊರಗಡೆ ಸೇವಿಸುವ ತಿಂಡಿ, ಊಟ ಎಷ್ಟು ಗುಣಮಟ್ಟ ಎಂಬುವುದನ್ನು ಯಾರೂ ಖಾತ್ರಿಪಡಿಸುತ್ತಿಲ್ಲ. ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ತುಂಬಾ ಬೇಕರಿಗಳಲ್ಲಿ ಹಳಸಿದ, ಹಲವು ದಿನಗಳ ಹಿಂದೆ ತಯಾರಿಸಿದ ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ಇದನ್ನು ಯಾರೊಬ್ಬರೂ ಪ್ರಶ್ನೆ ಮಾಡುತ್ತಿಲ್ಲ’ ಎಂದು ನಗರದ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ತಿಂಗಳಿಗೆ 300 ಮಾದರಿ ಪರೀಕ್ಷೆ ಗುರಿ ಗುರಿ ತಲುಪದ ಗುಣಮಟ್ಟ ಪ್ರಾಧಿಕಾರ ಆಹಾರ ಮಾದರಿ ಪರೀಕ್ಷೆ ಹಿನ್ನಡೆ
ಆಹಾರ ಗುಣಮಟ್ಟ ಪರೀಕ್ಷೆಗೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಸಮೀಕ್ಷೆಗಿಂತ ಕಾನೂನು ಬದ್ಧ ಮಾದರಿ ಪರೀಕ್ಷೆಗೆ ಆದ್ಯತೆ ನೀಡಲಾಗುತ್ತಿದೆ
-ಡಾ.ಪಿ.ಹರೀಶ್ ಜಿಲ್ಲಾ ಅಂಕಿತ ಅಧಿಕಾರಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ
ಒಬ್ಬರಿಗೆ 4 ತಾಲ್ಲೂಕಿನ ಹೊಣೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ 10 ಆಹಾರ ಸುರಕ್ಷತಾ ಅಧಿಕಾರಿ ಹುದ್ದೆಗಳು ಖಾಲಿ ಇವೆ. ತಾಲ್ಲೂಕಿಗೆ ಒಬ್ಬರಂತೆ 11 ಮಂದಿ ಅಧಿಕಾರಿಗಳನ್ನು ನೇಮಿಸಬೇಕು. ಆದರೆ ಒಬ್ಬರು ಮಾತ್ರ ಕಾಯಂ ಅಧಿಕಾರಿ ಇದ್ದಾರೆ. ಅವರಿಗೆ ನಾಲ್ಕು ತಾಲ್ಲೂಕುಗಳ ಜವಾಬ್ದಾರಿ ವಹಿಸಲಾಗಿದೆ. ಇಬ್ಬರನ್ನು ಆರೋಗ್ಯ ಇಲಾಖೆಯಿಂದ ನಿಯೋಜಿಸಲಾಗಿದೆ. ಹೀಗಾಗಿ ಮಾದರಿ ಸಂಗ್ರಹ ಪರೀಕ್ಷೆ ಕಾರ್ಯ ಆಮೆಗತಿಯಲ್ಲಿ ಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.