
ತಿಪಟೂರು: ತಾಲ್ಲೂಕಿನ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಶಾಂಭವಿ ಹಾಗೂ 7ನೇ ತರಗತಿಯ ಮಾನ್ಯ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಡಿಸೆಂಬರ್ 26ರಿಂದ ನಡೆದ 33ನೇ ಸಬ್ ಜೂನಿಯರ್ ರಾಷ್ಟ್ರಮಟ್ಟದ ಥ್ರೋಬಾಲ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಪಡೆದಿದ್ದಾರೆ.
ಹೊಸಹಳ್ಳಿ ಶಾಲೆಯಲ್ಲಿ 39 ವಿದ್ಯಾರ್ಥಿಗಳು, ನಾಲ್ವರು ಶಿಕ್ಷಕರಿದ್ದು, ಯಾವುದೇ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಉತ್ತಮ ಕ್ರೀಡಾ ಪರಿಕರ, ಸುಸಜ್ಜಿತ ಕ್ರೀಡಾಂಗಣವಿಲ್ಲದಿದ್ದರೂ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಮುಖ್ಯಶಿಕ್ಷಕ ಭರತ್‌ಪಟೇಲ್ ಮೂರು ವರ್ಷದಿಂದ ಪ್ರತಿದಿನ ಮುಂಜಾನೆ 5 ಗಂಟೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ನಗರದ ಕಲ್ಪತರು ಕ್ರೀಡಾಂಗಣಕ್ಕೆ ಅಭ್ಯಾಸಕ್ಕೆ ಬರುತ್ತಿದ್ದರು. ತರಬೇತುದಾರರಾದ ಪ್ರತಾಪ್, ಪವನ್ ಮತ್ತು ಮೇಘನಾ ಅವರ ನಿರಂತರ ಮಾರ್ಗದರ್ಶನ ಹಾಗೂ ಶಿಕ್ಷಕರ ಪ್ರೋತ್ಸಾಹ ವಿದ್ಯಾರ್ಥಿಗಳ ಸಾಧನೆಗೆ ನೆರವಾಗಿದೆ. ಶಾಂಭವಿ ತಂದೆ ಸ್ವಾಮಿಲೋಕೇಶ್ ಹಾಗೂ ಮಾನ್ಯ ತಂದೆ ವಸಂತ್‌ಕಮಾರ್ ಮಕ್ಕಳಿಗೆ ಶಕ್ತಿ ತುಂಬಿದ್ದಾರೆ.
ಸೌಲಭ್ಯಗಳ ಕೊರತೆಯ ನಡುವೆಯೂ ಹೊಸಹಳ್ಳಿ ಶಾಲೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಕ್ರೀಡಾಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡಿದೆ. ಕೊಕ್ಕೊ, ರಿಲೇ, ಥ್ರೋಬಾಲ್‌ಗಳಲ್ಲಿ ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಜ್ಜೆಗುರುತು ಮೂಡಿಸಿದೆ.
ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಮಕ್ಕಳು ಕ್ರೀಡಾಂಗಣಕ್ಕೆ ತೆರಳಿ ಚಳಿ ಮಳೆ ಲೆಕ್ಕಿಸದೆ ಅಭ್ಯಾಸ ನಡೆಸಿದ್ದರು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದಿರುವ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವುದು ನಮ್ಮ ಕರ್ತವ್ಯವಾಗಿತ್ತು.– ಭರತ್‌ಪಟೇಲ್, ಮುಖ್ಯಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.