ತುರುವೇಕೆರೆ: ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ತಾಲ್ಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶೀಘ್ರ ಚಾಲನೆ ನೀಡಬೇಕು ಎಂದು ಸದಸ್ಯರಿಗೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಲಿಂಗಪ್ಪ ಸಲಹೆ ನೀಡಿದರು.
ಪಟ್ಟಣದ ಕನ್ನಡ ಭವನದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಎಲ್ಲ ತಾಲ್ಲೂಕುಗಳಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ತುರುವೇಕೆರೆಯಲ್ಲೂ ಸಮ್ಮೇಳನ ನಡೆಸಲು ಕಳೆದೊಂದು ವರ್ಷದಿಂದ ಪ್ರಯತ್ನಗಳು ನಡೆದಿದ್ದು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಡಿ.ಪಿ.ರಾಜು ಮಾತನಾಡಿ, ‘ಆರಂಭಿಕ ಹಂತದಲ್ಲಿ ಸಾಹಿತ್ಯ ಪರಿಷತ್‌ನಿಂದ ಪ್ರತಿಭಾ ಪುರಸ್ಕಾರ, ಮನೆಮನೆ ಗೋಷ್ಠಿ, ಕನ್ನಡ ಕವಿಗಳ ಜಯಂತಿ, ಆಚರಣೆ ಮೊದಲಾದ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಆನಂತರ ಕೆಲ ಕಾರಣಗಳಿಂದ ಚಟುವಟಿಕೆಗಳು ಹಿನ್ನಡೆ ಕಂಡಿದ್ದು ನಿಜ. ಆದರೆ ಮುಂಬರುವ ಸಾಹಿತ್ಯ ಸಮ್ಮೇಳನದ ನೇತೃತ್ವವನ್ನು ವಹಿಸಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಮಾರ್ಗದರ್ಶನದೊಂದಿಗೆ ಆಗಸ್ಟ್‌ನಲ್ಲಿ ಸಮ್ಮೇಳನ ನಡೆಸುವೆ’ ಎಂದು ಭರವಸೆ ನೀಡಿದರು.
ಸಭೆಯಲ್ಲಿ ತಾಲ್ಲೂಕು ಕಸಾಪ ಗೌರವಾಧ್ಯಕ್ಷ ಟಿ.ಎಸ್.ಬೋರೇಗೌಡ, ಜಿಲ್ಲಾ ಕಾರ್ಯದರ್ಶಿ ಕಂಟಲಗೆರೆ ಸಣ್ಣಹೊನ್ನಯ್ಯ, ತುಮಕೂರು ತಾಲ್ಲೂಕು ಕಸಾಪ ಅಧ್ಯಕ್ಷ ಶಿವಕುಮಾರ್, ಬಿಇಒ ಎನ್.ಸೋಮಶೇಖರ್, ಪ್ರೊ.ಪುಟ್ಟರಂಗಪ್ಪ, ಪ್ರಸಾದ್, ಸಾ.ಶಿ.ದೇವರಾಜ್, ಎಂ.ಆರ್.ಪರಮೇಶ್ವರ ಸ್ವಾಮಿ, ದಿನೇಶ್, ಎನ್.ಆರ್.ಜಯರಾಮ್, ವೆಂಕಟೇಶ್, ಕೆಂಪರಾಜು, ಆರ್.ಸತ್ಯನಾರಾಯಣ್, ಮಂಜೇಗೌಡ, ಸತೀಶ್, ರೂಪಶ್ರೀ, ಬಸವರಾಜು, ವಿಶ್ವಾರಾಧ್ಯ, ಸಿ.ಪಿ.ಪ್ರಕಾಶ್, ಎಸ್.ಯೋಗಾನಂದ್, ಜಲಜಾಕ್ಷಿ, ಮುನಿರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.