ADVERTISEMENT

ತಿಪಟೂರು: ಕಡತದಲ್ಲಿ ನಗರಸಭೆ, ನಾಮಫಲಕದಲ್ಲಿ ಪುರಸಭೆ

ತಿಪಟೂರು ನಗರಸಭೆಯಾಗಿ ಮೇಲ್ದರ್ಜೆಗೇರಿ 18 ವರ್ಷ: ಹಲವೆಡೆ ನಾಮಫಲಕಗಳಲ್ಲಿ ಪುರಸಭೆಯಂದೇ ನಮೂದು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2024, 7:57 IST
Last Updated 23 ಡಿಸೆಂಬರ್ 2024, 7:57 IST
ತಿಪಟೂರು ನಗರದ ಶಂಕರಪ್ಪ ಲೇಔಟ್ 3ನೇ ಅಡ್ಡರಸ್ತೆಯಲ್ಲಿ ಪುರಸಭೆ ಎಂಬ ನಾಮಫಲಕ
ತಿಪಟೂರು ನಗರದ ಶಂಕರಪ್ಪ ಲೇಔಟ್ 3ನೇ ಅಡ್ಡರಸ್ತೆಯಲ್ಲಿ ಪುರಸಭೆ ಎಂಬ ನಾಮಫಲಕ   

ತಿಪಟೂರು: ನಗರವು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿ 18 ವರ್ಷಗಳು ಕಳೆದು ಆರು ಅದ್ಯಕ್ಷರು ಹಾಗೂ ಐದು ಪೌರಾಯುಕ್ತರು ಬದಲಾದರೂ ಇಲ್ಲಿನ ವಾರ್ಡ್‌ಗಳಿಗೆ ಹಾಗೂ ಅಡ್ಡರಸ್ತೆಗಳಿಗೆ ನಗರಸಭೆಯ ನಾಮಫಲಕ ಇಲ್ಲದೆ ಸಾರ್ವಜನಿಕರು ವಿಳಾಸ ಹುಡುಕಲು ಹರಸಾಹಸ ಪಡುವಂತಾಗಿದೆ.

ನಗರವೂ ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೊಡ್ಡ ನಗರ. ಒಟ್ಟು 31 ವಾರ್ಡ್‌ಗಳನ್ನು ಹೊಂದಿದೆ. ಜಿಲ್ಲಾ ಕೇಂದ್ರವನ್ನಾಗಿಸಲು ಕೂಗು ಕೇಳಿ ಬರುತ್ತಿದೆ. ಆದರೆ ಇಲ್ಲಿನ ವಾರ್ಡ್‌ಗಳ ವಿಂಗಡಣೆ ಹಾಗೂ ಬಡಾವಣೆಗಳಿಗೆ ಹೆಸರು ಇದ್ದರೂ ಇಲ್ಲದಂತಾಗಿದೆ. ಇನ್ನೂ ಹಲವೆಡೆಗಳಲ್ಲಿ ಪುರಸಭೆಯ ಕಾಲದ ಕೆಲ ಅಡ್ಡರಸ್ತೆಗಳ ಮಾರ್ಗಸೂಚಿಗಳು ಹಾಗೆಯೇ ಉಳಿದಿದ್ದು ಪುರಸಭೆ ಎಂದೇ ಉಳಿದುಕೊಂಡಿದೆ.

ನಗರಸಭೆ ಮುಂಬಾಗದಲ್ಲಿರುವ ವೃತ್ತಕ್ಕೆ ಸಿಂಗ್ರಿ ನಂಜಪ್ಪ ವೃತ್ತವೆಂದು ನಾಮಕರಣವಾಗಿದೆ. ಆದರೆ ಎಲ್ಲಿಯೂ ನಾಮಫಲಕವಿಲ್ಲದೆ ಸಾರ್ವಜನಿಕರೇ ನಗರಸಬಾ ವೃತ್ತ, ಪೈವೃತ್ತ, ಜಯದೇವ ಆಸ್ಪತ್ರೆ ವೃತ್ತ ಎಂದು ಕರೆಯುತ್ತಿದ್ದು, ತಾಲ್ಲೂಕಿಗೆ ತನ್ನದೆ ಆದ ಕೊಡುಗೆಗಳನ್ನು ನೀಡಿರುವ ಮಹನೀಯರ ಹೆಸರುಗಳೇ ಮಾಯವಾಗಿವೆ.

ADVERTISEMENT

ಇನ್ನೂ ಕೆಲವು ಬಡಾವಣೆಗಳ ನಾಮಫಲಕಗಳೇ ಕಣ್ಮರೆಯಾಗಿದ್ದು ಮತ್ತೆ ಕೆಲವು ಕಡೆಗಳಲ್ಲಿ ನಾಮಕಾವಸ್ಥೆಗೆ ಸೀಮಿತವಾಗಿವೆ. ಹೊಸ ಬಡಾವಣೆಗಳಲ್ಲಂತೂ ರಸ್ತೆಗಳ ಜತೆಗೆ ಹೆಸರೂ ಇಲ್ಲದೇ ಮನೆಗಳಿಗೆ ವಿಳಾಸ ತಿಳಿಸುವುದು ಕಷ್ಟಸಾಧ್ಯವಾಗಿದೆ. ನಗರಕ್ಕೆ ಹೊಸದಾಗಿ ಬಂದ ಅಪರಿಚಿತರಂತೂ ಸ್ಥಳೀಯ ವಿಳಾಸವನ್ನು ಹುಡುಕುವುದು ಸಾಹಸವೇ ಸರಿ. ಸಮರ್ಪಕ ವಿಳಾಸ ದೊರಕದ ಕಾರಣಕ್ಕಾಗಿ ಅಂಚೆ ಇಲಾಖೆಯಿಂದ ಬರುವ ಅನೇಕ ಅಂಚೆ ಪತ್ರಗಳು, ಬ್ಯಾಂಕ್ ದಾಖಲೆ, ಉದ್ಯೋಗ ನೇಮಕಾತಿ ಪತ್ರಗಳು ಸೇರಿದಂತೆ ಕೋರಿಯರ್ ಹಲವು ಬಾರಿ ವಾಪಸ್ಸಾಗಿರುವ ನಿದರ್ಶನಗಳಿವೆ. ಇನ್ನೂ ಆಹಾರ ವಿತರಣೆ (ಫುಡ್ ಡೆಲಿವರಿ) ಮಾಡುವ ಅನೇಕ ಕಂಪನಿಗಳ ಡೆಲಿವರಿ ಬಾಯ್‌ಗಳು ಸರಿಯಾದ ಸಮಯಕ್ಕೆ ಆಹಾರ ನೀಡಲು ಸಾಧ್ಯವಾಗದಂತಾಗಿದೆ.

ನಗರದ 31ನೇ ವಾರ್ಡ್‌ಗಳಲ್ಲಿ ಪುರಾತನ ಕಾಲದಿಂದಲೂ ನೆಲೆಗೊಂಡಿರುವ ಕೆ.ಆರ್. ಬಡಾವಣೆ, ಶಂಕರಪ್ಪ ಲೇಔಟ್, ವಿನಾಯಕ ನಗರ, ರಾಘವೇಂದ್ರ ಕಾಲೊನಿ, ವಿದ್ಯಾನಗರ, ಕೋಟೆ, ಗಾಂಧಿನಗರ, ಹಳೇಪಾಳ್ಯ, ದೊಡ್ಡಪೇಟೆಯಂತಹ ಬಡಾವಣೆಗಳಿಗೆ ನಾಮಫಲಕಗಳಿಲ್ಲ.

ನಗರದ 25 ಮತ್ತು 27ನೇ ವಾರ್ಡ್‌ನಲ್ಲಿ ₹19.92 ಲಕ್ಷ ವೆಚ್ಚದಲ್ಲಿ 440 ನಾಮಫಲಕ, 31ನೇ ವಾರ್ಡ್‌ನಲ್ಲಿ ₹5.07 ಲಕ್ಷದಲ್ಲಿ 90 ನಾಮಫಲಕ ಅಳವಡಿಸಲು 2022-23ನೇ ಸಾಲಿನ ಬಜೆಟ್‌ನಲ್ಲಿ ಅನುಮೋದನೆಕೊಂಡಿತ್ತು. ಲೋಕೋಪಯೋಗಿ ಇಲಾಖೆಯಲ್ಲಿ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು, ಈಗಾಗಲೇ ಮೂರು ವಾರ್ಡ್‌ಗಳಿಗೆ ಸೀಮಿತವಾಗಿ ನಾಮಫಲಕಗಳನ್ನು ಅಳವಡಿಸಲಾಗಿದ್ದರೂ ಯಾವುದೇ ಗುಣಮಟ್ಟವಿಲ್ಲದೆ ನಾಮಕವಸ್ತೆಗೆ ಹಾಕಲಾಗುತ್ತಿದೆ. ಒಂದು ನಾಮಫಲಕದ ಬೋರ್ಡ್‌ಗೆ ₹4,487 ವೆಚ್ಚ ಭರಿಸಲಾಗಿದೆ ಎಂದು ಎಂಜಿನಿಯರ್ ತಿಳಿಸಿದ್ದಾರೆ.

ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಅನೇಕ ಬಾರಿ ನಾಮಫಲಕಗಳ ವಿಚಾರ ಪ್ರಸ್ತಾಪವಾಗಿದ್ದು, ಅನೇಕ ಭರವಸೆಗಳು ಕೇಳಿಬಂದಿವೆ. ಆದರೆ ನೂತನ ನಾಮಫಲಕವನ್ನು ಅಳವಡಿಸುವ ಭರವಸೆ ಮಾತ್ರ ಕಾರ್ಯರೂಪಕ್ಕೆ ಬಂದಿಲ್ಲ.

ನಾಮಫಲಕ ಅಳವಡಿಸಲು ನಗರಸಭೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೋಟಿ ರೂಪಾಯಿ ಬಜೆಟ್ ಮಂಡನೆ ಮಾಡುವ ನಗರಸಭೆ ಹಾಗೂ ಜಿಲ್ಲೆಯಾಗುವ ಅರ್ಹತೆಯಿದ್ದರೂ ಅದಕ್ಕೆ ತಕ್ಕಂತೆ ಅಭಿವೃದ್ಧಿಯಾಗಿಲ್ಲ.
ಶ್ರೀಕಂಠ, ಮಾವಿನತೋಪು
ಈಗಾಗಲೇ ಮೂರು ವಾರ್ಡ್‌ಗಳಿಗೆ ನಗರೋತ್ಥಾನದಡಿ ನಾಮಫಲಕ ಅಳವಡಿಕೆ ಕೆಲಸ ಪ್ರಾರಂಭವಾಗಿದೆ. ಉಳಿದ ವಾರ್ಡ್‌ಗಳಿಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು.
ವಿಶ್ವೇಶ್ವರ ಬದರಗಡೆ, ಪೌರಯುಕ್ತ
ಬೇರೆ ನಗರಗಳಿಂದ ತಿಪಟೂರಿಗೆ ಬರುವ ಅಪರಿಚತರಿಗೆ ವಾರ್ಡ್‌ಗಳಲ್ಲಿ ಸರಿಯಾದ ನಾಮಫಲಕವಿಲ್ಲದೆ ಹೋದರೆ ವಿಳಾಸ ಹುಡುಕುವುದು ಕಷ್ಟಕರ. ನಾಮಫಲಕ ಅಳವಡಿಸುವಾಗ ಆಯಾ ಸ್ಥಳದ ಮಹತ್ವ ಗುರುತಿಸಿದರೆ ಇತಿಹಾಸ ತಿಳಿದುಕೊಳ್ಳಲು ಸಹಾಯಕ.
ಅಂಜನಾಮೂರ್ತಿ, ಛಲವಾಧಿ ಮಹಾಸಭಾ ಪ್ರಧಾನ ಕಾರ್ಯದರ್ಶಿ
ಮೊದಲ ಹಂತದಲ್ಲಿ ಮೂರು ವಾರ್ಡ್‌ಗಳಲ್ಲಿ ನಗರೋತ್ಥಾನ ಅನುದಾನದಲ್ಲಿ ನಾಮಫಲಕ ಅಳವಡಿಸಲಾಗುತ್ತಿದೆ. ಪುರಸಭೆ ಎಂದು ಇರುವ ಬೋರ್ಡ್‌ಗಳನ್ನು ಪತ್ತೆಹಚ್ಚಿ ಶೀಘ್ರ ಬದಲಾಯಿಸಲಾಗುವುದು.
ಯಮುನಾ ಧರಣೇಶ್, ನಗರಸಭೆ ಅಧ್ಯಕ್ಷೆ
ತಿಪಟೂರು ಷಡಾಕ್ಷರ ಮಠದ ನಾಮಫಲಕಕ್ಕೆ ಗಿಡ ಗಂಟೆ ಬಳ್ಳಿಗಳಿಂದ ಅವೃತ್ತವಾಗಿದೆ
ಗಾಂಧೀನಗರದಲ್ಲಿ ನಾಮಫಲಕ ನೆಲಕ್ಕೆ ಉರುಳಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.