ADVERTISEMENT

ತಿಪಟೂರು: 8ಕ್ಕೆ ಪಂಚರತ್ನ ಯಾತ್ರೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 4:39 IST
Last Updated 3 ಮಾರ್ಚ್ 2023, 4:39 IST
ತಿಪಟೂರು ತಾಲ್ಲೂಕು ಜೆಡಿಎಸ್ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಟಿ.ಎಸ್. ಗುರುಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು
ತಿಪಟೂರು ತಾಲ್ಲೂಕು ಜೆಡಿಎಸ್ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಟಿ.ಎಸ್. ಗುರುಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು   

ತಿಪಟೂರು: ಕಳೆದ ಕೆಲವು ವರ್ಷಗಳಿಂದ ಖಾಲಿ ಉಳಿದಿದ್ದ ತಿಪಟೂರು ತಾಲ್ಲೂಕು ಜೆಡಿಎಸ್ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಟಿ.ಎಸ್. ಗುರುಮೂರ್ತಿ ಆಯ್ಕೆಯಾಗಿದ್ದಾರೆ.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರ ಪಂಚರತ್ನ ರಥಯಾತ್ರೆಯ ಪೂರ್ವಭಾವಿ ಸಭೆ ಹಾಗೂ ತಾಲ್ಲೂಕು ಜೆಡಿಎಸ್ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನಗರ ಘಟಕದ ಅಧ್ಯಕ್ಷರಾಗಿ ಕಂಚಾಘಟ್ಟದ ಬಸವರಾಜು ಎಸ್.(ರಾಜು), ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ನೊಣವಿನಕೆರೆಯ ರಾಕೇಶ್ ಗೌಡ, ನಗರ ಯುವ ಘಟಕದ ಅಧ್ಯಕ್ಷರಾಗಿ ಎಚ್.ಆರ್. ಹೇಮರಾಜು, ತಾಲ್ಲೂಕು ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾಗಿ ಪೆದ್ದಿಹಳ್ಳಿ ಧನಂಜಯ, ನಗರ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾಗಿ ಕಂಚಾಘಟ್ಟದ ಎಸ್. ನಟರಾಜು ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನೂ ತಾಲ್ಲೂಕು ಸೂಗೂರು ಶಿವಸ್ವಾಮಿ ಅವರನ್ನು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ADVERTISEMENT

ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿ, ‘ಎಚ್.ಡಿ. ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ಮಾರ್ಚ್‌ 8ರಂದು ಪಂಚರತ್ನ ರಥಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂದು ಬೆಳಿಗ್ಗೆ 10.30ಕ್ಕೆ ಯಾತ್ರೆಯು ನಗರದ ಕಲ್ಪತರು ಕ್ರೀಡಾಂಗಣದಿಂದ ಪ್ರಾರಂಭವಾಗಲಿದೆ. ಬಿದರೆಗುಡಿ, ನಂತರ ಹೊನ್ನವಳ್ಳಿಯಲ್ಲಿ ಜನತೆಯನ್ನು ಉದ್ದೇಶಿಸಿ ಸಭೆ ನಡೆಯಲಿದೆ. ಹಾಲ್ಕುರಿಕೆ ಮಾರ್ಗವಾಗಿ ಮಣಕೀಕೆರೆ, ತಿಪಟೂರು ನಗರಕ್ಕೆ ಬರಲಿದೆ ಎಂದು
ವಿವರಿಸಿದರು.

ತಿಪಟೂರು ನಗರದ ಕೆಂಪಮ್ಮದೇವಿ ದೇವಾಲಯದಲ್ಲಿ ಪೂಜೆ, ಗಾಂಧಿನಗರದ ಸರ್ಕಲ್, ನಂತರ ಕೆರೆಗೋಡಿ ರಂಗಾಪುರ ಸುಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮೀಜಿಯಿಂದ ಆಶೀರ್ವಾದ ಪಡೆಯಲಾಗುವುದು. ಬಳಿಕ ಹುಣಸೇಘಟ್ಟ ಗ್ರಾಮ, ನೊಣವಿನಕೆರೆಗೆ ಸಂಜೆ ತಲುಪಲಿದೆ. ಅಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ. ರಾತ್ರಿ ವೇಳೆಗೆ ಕೆ.ಬಿ. ಕ್ರಾಸ್ ತಲುಪಲಿದ್ದು, ಕಿಬ್ಬನಹಳ್ಳಿಯಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡಲಿದ್ದಾರೆ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ. ಆಂಜನಪ್ಪ ಮಾತನಾಡಿ, ರಾಜ್ಯದಲ್ಲಿ ಪಂಚರತ್ನ ಯಾತ್ರೆಯು ಸಂಚಲನ ಸೃಷ್ಟಿಸಿದೆ. ತಿಪಟೂರು ವಿಧಾನಸಭಾ ಕ್ಷೇತ್ರದಿಂದಲೂ ಜೆಡಿಎಸ್‌ ಸರ್ಕಾರಕ್ಕೆ ಕೊಡುಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ
ಎಂದರು.

ಜಿಲ್ಲಾ ಜೆಡಿಎಸ್ ಘಟಕದ ಉಪಾಧ್ಯಕ್ಷ ಗಂಗಣ್ಣ, ರಾಜ್ಯ ಎಸ್.ಟಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಅಲ್ಪಸಂಖ್ಯಾತರ ಘಟಕದ ತನ್ವೀರ್ ಅಹಮದ್, ಮಹಿಳಾ ಅಲ್ಪಸಂಖ್ಯಾತರ ಘಟಕದ ತಾಹಿರಾ, ಕುಸುಮಾ ಜಗನ್ನಾಥ್, ಜಿ.ಪಂ. ಮಾಜಿ ಸದಸ್ಯೆ ರಾಧಾ ನಾರಾಯಣ ಗೌಡ, ನಗರಸಭಾ ಮಾಜಿ ಸದಸ್ಯೆ ರೇಖಾ ಅನೂಪ್, ತಾ.ಪಂ. ಮಾಜಿ ಸದಸ್ಯ ನಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.