
ತಿಪಟೂರು: ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಮಕೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ–206ರ ಪಕ್ಕದಲ್ಲಿರುವ ಶತಮಾನಗಳ ಪುರಾತನ ಅಯ್ಯನಬಾವಿಗೆ ಅಪಾಯ ಎದುರಾಗಿದೆ.
ಹೆದ್ದಾರಿಯ 3ರಿಂದ 4 ಮೀಟರ್ ಅಂತರದಲ್ಲಿರುವ ಎರಡು ಎಕರೆ ವಿಸ್ತೀರ್ಣದಲ್ಲಿ ಆಳವಾಗಿದೆ. ಈ ಬಾವಿಯನ್ನು ಪುರಾತನ ಕಾಲದಲ್ಲಿ ಕೆರೆಗೋಡಿ ರಂಗಾಪುರ ಸ್ವಾಮೀಜಿ ನಿರ್ಮಿಸಿದ್ದು, ಇಂದಿಗೂ ರೈತರು ಮತ್ತು ಜಾನುವಾರುಗಳಿಗೆ ಜೀವನಾಡಿಯಾಗಿದೆ.
ಇತ್ತೀಚಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಬಾವಿಯ ಅಂಚು ಸಂಪೂರ್ಣ ಅಪಾಯಕಾರಿಯಾಗಿದೆ. ಇಳಿಜಾರು ಪ್ರದೇಶದ ಮಧ್ಯದಲ್ಲಿರುವ ಬಾವಿಯ ಸುತ್ತಮುತ್ತ ಯಾವುದೇ ತಡೆಗೋಡೆ, ಎಚ್ಚರಿಕೆ ಫಲಕ ಅಥವಾ ಬೆಳಕಿನ ವ್ಯವಸ್ಥೆ ಇಲ್ಲದೆ ರಸ್ತೆ ನಿರ್ಮಿಸಲಾಗಿದೆ. ಈ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು ವಾಹನಗಳ ಸಂಚಾರ ದಟ್ಟವಾಗಿದೆ. ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿರುವುದರಿಂದ ಬಾವಿಗೆ ನೀರಿನ ಮೂಲವೇ ಇಲ್ಲವಾಗಿದೆ.
ಕಾಮಗಾರಿ ವೇಳೆ ಬಾವಿಯ ಸುತ್ತಲಿನ ಭೂಮಿಯನ್ನು ಕತ್ತರಿಸಿ ರಸ್ತೆ ಹಾದುಹೋಗುವಂತೆ ಮಾಡಲಾಗಿದೆ. ಅದರ ಭದ್ರತೆಗಾಗಿ ಪ್ರಾಧಿಕಾರದಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ಪಕ್ಕದಲ್ಲಿ ಬಾವಿಯ ಭಾಗ ತೆರೆದಿದೆ. ಮಳೆ ನೀರು ಹರಿದು ರಸ್ತೆಯ ಮೇಲೆ ಮಣ್ಣು ನಿಂತಿದ್ದು, ಜಾರಿದರೆ ಬಾವಿಯೊಳಗೆ ಬೀಳಬೇಕಾದ ಸ್ಥಿತಿ ಇದೆ. ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರಗೋಡಿ ರಂಗಾಪುರ ಹಿರಿಯ ಸ್ವಾಮೀಜಿ ನೀರಿನ ಆಸರೆಯಾಗಿ ಅಲ್ಲಲ್ಲಿ ಬಾವಿಗಳನ್ನು ತೊಡಿಸುತ್ತಿದ್ದರು. ಅದರಂತೆ ಕಾಡು, ಮರ, ಕುರುಚಲು ಗಿಡಗಳ ಪ್ರದೇಶವಾಗಿದ್ದ ಸ್ಥಳದಲ್ಲಿ ಬಾವಿ ನಿರ್ಮಿಸಿದ್ದರು. ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರಿಗೆ ಸಂಭಾವನೆ ನೀಡಲು ಪಕ್ಕದಲ್ಲಿರುವ ಹುತ್ತಕ್ಕೆ ಕೈ ಹಾಕಿ ನಾಣ್ಯಗಳನ್ನು ಶ್ರಮಕ್ಕೆ ತಕ್ಕಂತೆ ಪಡೆದಿದ್ದರು ಎಂಬ ಪ್ರತೀತಿ ಇದೆ. ಸ್ಥಳೀಯರು ಸ್ವಾಮೀಜಿಯನ್ನು ‘ಅಯ್ಯನವರು’ ಎಂದು ಕರೆಯುತ್ತಿದ್ದರಿಂದ ಇದು ಅಯ್ಯನ ಬಾವಿಯಾಯಿತು ಎಂಬ ಇತಿಹಾಸ ಇದೆ.
ಇಲ್ಲಿನ ಎರಡು ಎಕರೆ ಪ್ರದೇಶದಲ್ಲಿ 150 ಹಾಗೂ 200 ಅಡಿ ವಿಸ್ತೀರ್ಣದ 70 ಅಡಿ ಅಳವಿರುವ ಬಾವಿಯಲ್ಲಿ ಚಿಕ್ಕ ಚಿಕ್ಕ ಮೂರು ಬಾವಿಗಳಿವೆ. ಅಯ್ಯನ ಬಾವಿ ಕೇವಲ ನೀರಿನ ಮೂಲವಷ್ಟೇ ಅಲ್ಲ. ಪೂಜನೀಯ ಭಾವವೂ ಇದೆ. ಗಂಗಾ ಪೂಜೆ, ಹರಕೆ, ಗಣಪತಿ ವಿಸರ್ಜನಾ ಕಾರ್ಯ ಸಹ ನಡೆಯಲಿವೆ.
ವರನಟ ದಿ.ರಾಜ್‌ಕುಮಾರ್ ಹಾಗೂ ಅವರ ಸ್ನೇಹಿತ ನಗರದ ರಾಮಸ್ವಾಮಿ ಅವರನ್ನು ಭೇಟಿ ಮಾಡುವಾಗ ಅಯ್ಯನ ಬಾವಿಗೆ ಬಂದು ಕೆಲ ಕಾಲ ವಿಶ್ರಾಂತಿ ಪಡೆದು, ವಿಹಾರ ಮಾಡುತ್ತಿದ್ದರು. ಇಷ್ಟೆಲ್ಲಾ ಐತಿಹಾಸಿಕ ಹಿನ್ನಲೆ ಹೊಂದಿರುವ ಈ ಬಾವಿಯು ಹೆದ್ದಾರಿ ಕಾಮಗಾರಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ, ತಾಲ್ಲೂಕು ಆಡಳಿತ ಎಚ್ಚೆತ್ತು ರಕ್ಷಣೆ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಬೇಡಿಕೆ.
ಹೆದ್ದಾರಿ ಮೇಲ್ಸೇತುವೆ ಗ್ರಾಮದಿಂದ ದೂರದಲ್ಲಿ ನಿರ್ಮಿಸಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಕೆಳಸೇತುವೆ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಬಸವಯ್ಯ ಸ್ಥಳೀಯ
ಅಯ್ಯನ ಬಾವಿ ಪ್ರವಾಸಿ ತಾಣವಾಗಿ ಪ್ರಸಿದ್ಧಿಯಾಗಬೇಕಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ ಅಧಿಕಾರಿಗಳ ಕಾಳಜಿಯ ಕೊರತೆಯಿಂದ ಅಪಾಯ ಎದುರಾಗಿದೆ.ತಿಮ್ಮಯ್ಯ ಗ್ರಾಮಸ್ಥ
ಸರ್ಕಾರ ಬಾವಿಯ ಸುತ್ತ ತಂತಿ ಬೇಲಿ ಹಾಕಿಸಿ ಉದ್ಯಾನ ನಿರ್ಮಿಸಲಿ. ರಾಜ್‌ಕುಮಾರ್ ಅವರ ಪ್ರತಿಮೆ ನಿರ್ಮಿಸಿದರೆ ಉತ್ತಮ.ನಾಗರಾಜು ನಿವೃತ್ತ ಪ್ರಾಂಶುಪಾಲ