
ತಿಪಟೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಅಂಬೇಡ್ಕರ್ ಸೇವಾ ಸಮಿತಿಯಿಂದ ತಾಲ್ಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನಿಂದ ಹತ್ಯಾಳ ನರಸಿಂಹ ಬೆಟ್ಟದವರೆಗೆ ಕಾಲ್ನಡಿಗೆ ಜಾಥಾ ಕೈಗೊಂಡು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಿಬ್ಬನಹಳ್ಳಿ ಹೋಬಳಿಯ ಯಗಚೀಕಟ್ಟೆ, ಬೆಟ್ಟದ ಗೇಟ್ ಹಾಗೂ ರಜತಾದ್ರಿಪುರ ಗೇಟ್ ಪ್ರದೇಶಗಳಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯಿಂದ ಸಾರ್ವಜನಿಕರು ದಿನನಿತ್ಯ ಜೀವಭಯದ ನಡುವೆ ಸಂಚರಿಸುವಂತಾಗಿದೆ. ಬೆಟ್ಟದ ಗೇಟ್‌ನಲ್ಲಿ ಅಂಡರ್‌ಪಾಸ್ ಮತ್ತು ಸರ್ವಿಸ್ ರಸ್ತೆ ನಿರ್ಮಿಸದೇ ಹೆದ್ದಾರಿ ಕಾಮಗಾರಿ ನಡೆಸಲಾಗಿದೆ. ರಜತಾದ್ರಿಪುರ ಗೇಟ್‌ನಲ್ಲಿಯೂ ಸರ್ವಿಸ್ ರಸ್ತೆ, ಬಸ್ ನಿಲುಗಡೆ ಹಾಗೂ ಪ್ರಯಾಣಿಕರ ತಂಗುದಾಣಗಳ ಕೊರತೆಯಿಂದ ವಿದ್ಯಾರ್ಥಿಗಳು, ರೈತರು, ವೃದ್ಧರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಯಗಚೀಕಟ್ಟೆ, ಕೋಡುಗಲ್ ಪಾಳ್ಯ, ಕೋಡುಗಲ್ ಹಟ್ಟಿ, ಹೊಸಹಟ್ಟಿ, ಅಡವನಹಳ್ಳಿ, ಅಡವನಹಳ್ಳಿ ಗೊಲ್ಲರಹಟ್ಟಿ ಹಾಗೂ ಹುಲ್ಲೇಕೆರೆ ಹಟ್ಟಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಬೆಟ್ಟದ ಗೇಟ್ ಬಳಿ ಅಂಡರ್‌ಪಾಸ್ ಇಲ್ಲದ ಕಾರಣ ಬ್ಯಾರಿಕೇಡ್ ದಾಟಿ ಹೆದ್ದಾರಿ ರಸ್ತೆ ದಾಟುವಂತಾಗಿದೆ. ಕೆ.ಬಿ.ಕ್ರಾಸ್‌ನಿಂದ ಗ್ರಾಮಗಳಿಗೆ ತೆರಳಲು ಏಕಮುಖ ರಸ್ತೆಯಲ್ಲೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.
2018ರಿಂದಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ತಾಲ್ಲೂಕು ಆಡಳಿತಕ್ಕೆ ಅನೇಕ ಬಾರಿ ಮೌಖಿಕ ಹಾಗೂ ಪತ್ರದ ಮೂಲಕ ಮನವಿ ಸಲ್ಲಿಸಿದ್ದೇವೆ. ಆದರೆ ಅಧಿಕಾರಿಗಳು ಮನವಿ ಸ್ವೀಕರಿಸುವುದರಲ್ಲೇ ಸೀಮಿತವಾಗಿ, ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕರ ಸುರಕ್ಷತೆ, ವಿದ್ಯಾರ್ಥಿಗಳ ಭವಿಷ್ಯ ಮತ್ತು ರೈತರ ದಿನನಿತ್ಯದ ಬದುಕನ್ನು ಗಮನದಲ್ಲಿಟ್ಟು ತಕ್ಷಣವೇ ಬೆಟ್ಟದ ಗೇಟ್‌ನಲ್ಲಿ ಅಂಡರ್‌ಪಾಸ್, ಅಗತ್ಯ ಸರ್ವಿಸ್ ರಸ್ತೆ, ಬಸ್ ನಿಲುಗಡೆ ಹಾಗೂ ತಂಗುದಾಣ ನಿರ್ಮಿಸಬೇಕು ಎಂದು ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.
ಅಂಬೇಡ್ಕರ್ ಸೇವಾ ಸಮಿತಿ ವಿಭಾಗೀಯ ಅಧ್ಯಕ್ಷ ರಾಘು ಯಗಚಿಕಟ್ಟೆ, ತಾಲ್ಲೂಕು ಅಧ್ಯಕ್ಷ ಶಿವಕುಮಾರ್, ಜಿ.ಪಂ ಮಾಜಿ ಸದಸ್ಯ ಕೊಪ್ಪ ಶಾಂತಪ್ಪ, ಭೈರಪ್ಪ, ಮೆಂಬರ್ ಆಟೊ ಮೂರ್ತಿ, ತಿಮ್ಮರಾಯಪ್ಪ ರಮೇಶ್, ರಂಗರಾಜು, ಬಸವರಾಜ್, ಅಶೋಕ್, ದಯಾನಂದ್, ಸುರೇಶ್, ಆಟೊ ಯಶೋದಾರ್, ಸತಿ, ಕುಮಾರ್ ಪುನೀತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.