ADVERTISEMENT

ತಾ.ಪಂ ಅಧ್ಯಕ್ಷರ ಬದಲಾವಣೆಗೆ ಯತ್ನ?

ತಿಪಟೂರು ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣಕ್ಕೆ ಮತ್ತೊಂದು ವೇದಿಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 16:55 IST
Last Updated 28 ಆಗಸ್ಟ್ 2020, 16:55 IST

ತುಮಕೂರು: ತಿಪಟೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವಸ್ವಾಮಿ ಬದಲಾವಣೆಗೆ ಕಾಂಗ್ರೆಸ್‌ ಪಕ್ಷದಲ್ಲಿ ಪ್ರಯತ್ನಗಳು ಆರಂಭವಾಗಿದ್ದು, ಇದು ತಾಲ್ಲೂಕು ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಧ್ಯಕ್ಷ ಸ್ಥಾನ ಬಿಸಿಎಂ ‘ಬಿ’ಗೆ ಮೀಸಲಿದೆ. ಮಾಜಿ ಶಾಸಕ ಕೆ.ಷಡಕ್ಷರಿ ರಾಜೀನಾಮೆಗೆ ಸೂಚಿಸಿದ್ದಾರೆ. ಮತ್ತಿಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯ ಸುರೇಶ್ ಅವರನ್ನು ಆ ಸ್ಥಾನದಲ್ಲಿ ಕೂರಿಸುವ ಇರಾದೆ ಮಾಜಿ ಶಾಸಕರಿಗೆ ಇದೆ ಎನ್ನಲಾಗಿದೆ.

15 ಸದಸ್ಯ ಬಲದ ತಾ.ಪಂ.ನಲ್ಲಿ ಕಾಂಗ್ರೆಸ್‌ 7, ಬಿಜೆಪಿ 6, ಜೆಡಿಎಸ್‌ನ ಒಬ್ಬ ಮತ್ತು ಒಬ್ಬ ಪಕ್ಷೇತರ ಸದಸ್ಯರು ಇದ್ದಾರೆ. ನೊಣವಿನಕೆರೆ ಕ್ಷೇತ್ರದ ಪಕ್ಷೇತರ ಸದಸ್ಯ ಶಂಕರ್ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಪಕ್ಷವು ಅಧಿಕಾರ ಹಿಡಿದಿದೆ.

ADVERTISEMENT

ಮೂರು ವರ್ಷಗಳ ಕಾಲ ನ್ಯಾಕೇನಹಳ್ಳಿ ಸುರೇಶ್ ಅಧ್ಯಕ್ಷರಾಗಿದ್ದರು. ನಂತರ ದಸರಿಘಟ್ಟ ಕ್ಷೇತ್ರದ ಸದಸ್ಯ ಶಿವಸ್ವಾಮಿ ಅಧಿಕಾರ ವಹಿಸಿಕೊಂಡರು.

ತಾ.ಪಂ ಅವಧಿ ಕೇವಲ ಐದಾರು ತಿಂಗಳಿದೆ. ಇಂತಹ ಸಮಯದಲ್ಲಿ ಅಧ್ಯಕ್ಷರ ಬದಲಾವಣೆಗೆ ಮುಂದಾಗಿರುವುದು ಚರ್ಚೆಗೆ ಕಾರಣವಾಗಿದೆ. ತಿಪಟೂರು ತಾಲ್ಲೂಕು ಕಾಂಗ್ರೆಸ್‌ನಲ್ಲಿ ಈ ಹಿಂದಿನಿಂದಲೂ ಮಾಜಿ ಶಾಸಕ ಕೆ.ಷಡಕ್ಷರಿ ಮತ್ತು ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರ ಬಣಗಳಿವೆ. ಈ ಬಣ ರಾಜಕಾರಣವೂ ಬದಲಾವಣೆಗೆ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಉಪಾಧ್ಯಕ್ಷ ಶಂಕರ್, ತಮಗೂ ಅಧ್ಯಕ್ಷ ಸ್ಥಾನವನ್ನು ನೀಡುವಂತೆ ಆಗ್ರಹಿಸಿದ್ದಾರೆ. ಅಧ್ಯಕ್ಷ ಸ್ಥಾನದ ಬದಲಾವಣೆಯು ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣದ ಜತೆಗೆ ಒಕ್ಕಲಿಗ ಮತ್ತು ಲಿಂಗಾಯತ ಎನ್ನುವ ಜಾತಿ ರಾಜಕಾರಣದ ಚರ್ಚೆಯನ್ನೂ ಹುಟ್ಟು ಹಾಕಿದೆ ಎನ್ನುತ್ತವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.