ADVERTISEMENT

ತುಮಕೂರು: ಲಕೋಟೆಯಲ್ಲಿ ಮಿಂಚಲಿವೆ ಪ್ರವಾಸಿತಾಣ

ಫೆ.21ರಿಂದ ಅಂಚೆ ಇಲಾಖೆ ಹಮ್ಮಿಕೊಂಡಿರುವ ‘ತುಮಕೂರು ಪೆಕ್ಸ್–2020’ ಕಾರ್ಯಕ್ರಮದಲ್ಲಿ ಬಿಡುಗಡೆಗೆ ಸಿದ್ಧತೆ

ಡಿ.ಎಂ.ಕುರ್ಕೆ ಪ್ರಶಾಂತ
Published 11 ಫೆಬ್ರುವರಿ 2020, 19:30 IST
Last Updated 11 ಫೆಬ್ರುವರಿ 2020, 19:30 IST
ಲಕೋಟೆ
ಲಕೋಟೆ   

ತುಮಕೂರು: ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಮತ್ತಷ್ಟು ಮಗದಷ್ಟು ಜನರಿಗೆ ದೊರೆಯಲಿ, ಆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿ ಎನ್ನುವ ದೂರದೃಷ್ಟಿಯಿಂದ ಅಂಚೆ ಇಲಾಖೆಯು ಜಿಲ್ಲೆಯ ಪ್ರವಾಸಿತಾಣಗಳ ಮಾಹಿತಿ ಒಳಗೊಂಡ ವಿಶೇಷ ಅಂಚೆ ಲಕೋಟೆ ಮತ್ತು ಸಚಿತ್ರ ಅಂಚೆ ಕಾರ್ಡ್ (ಪಿಚ್ಚರ್ ಪೋಸ್ಟ್ ಕಾರ್ಡ್‌) ರೂಪಿಸಿದೆ.

ಫೆ.21ರಿಂದ 23ರವರೆಗೆ ಅಂಚೆ ಇಲಾಖೆ ಹಮ್ಮಿಕೊಂಡಿರುವ ‘ತುಮಕೂರು ಪೆಕ್ಸ್–2020’ ಕಾರ್ಯಕ್ರಮದಲ್ಲಿ ಈ ಲಕೋಟೆ ಮತ್ತು ಪಿಚ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆಗೊಳ್ಳಲಿವೆ.

ಶಿರಾ ತಾಲ್ಲೂಕಿನ ಕಗ್ಗಲಡು ಪಕ್ಷಿಧಾಮ, ಕಸ್ತೂರಿ ರಂಗಪ್ಪನಾಯಕನ ಕೋಟೆ, ದೇವರಾಯನದುರ್ಗ ಬೋಗಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯ, ಮಾರ್ಕೊನಹಳ್ಳಿ ಜಲಾಶಯ, ತೆಂಗಿನ ಮರ, ನಾಗಲಾಪುರದ ಚನ್ನಕೇಶವ ದೇವಾಲಯ, ಮಧುಗಿರಿಯ ಜಯಮಂಗಲಿ ಕೃಷ್ಣಮೃಗ ವನ್ಯಧಾಮ, ಟಿ.ಆರ್.ನರಸಿಂಹರಾಜು, ನಿಟ್ಟೂರಿನ ಜ್ವಾಲಾಮಾಲಿನಿ ದೇವಿ ಹೀಗೆ ಹಲವು ಪ್ರಮುಖ ಪ್ರವಾಸಿ ತಾಣಗಳು ವಿಶೇಷ ಅಂಚೆ ಲಕೋಟೆಯಲ್ಲಿ ಸ್ಥಾನ ಪಡೆದಿವೆ.

ADVERTISEMENT

ಈ ಲಕೋಟೆಯ ಒಂದು ಬದಿಯಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರವಾಸಿ ತಾಣಗಳ ಬಗ್ಗೆ ಸಂಕ್ಷಿಪ್ತವಾಗಿಯೂ ಮಾಹಿತಿ ನೀಡಲಾಗಿದೆ. ಈ ವಿಶೇಷ ಅಂಚೆ ಲಕೋಟೆಗಳು ದೇಶದ ಎಲ್ಲ ಅಂಚೆ ಕಚೇರಿಗಳಲ್ಲಿಯೂ ದೊರೆಯಲಿವೆ.

ಪಿಚ್ಚರ್ ಪೋಸ್ಟ್ ಕಾರ್ಡ್‌ಗಳಲ್ಲಿ ಪ್ರವಾಸಿ ತಾಣಗಳ ಮಾಹಿತಿ ದೊರೆಯಲಿದೆ. ಪ್ರವಾಸಿ ತಾಣಗಳ ಆಕರ್ಷಕ ಚಿತ್ರಗಳನ್ನು ಒಳಗೊಂಡಿರುವ ಈ ಕಾರ್ಡ್‌ಗಳು ಆಸಕ್ತ ಪ್ರವಾಸಿಗರನ್ನು ಆ ತಾಣಗಳಿಗೆ ಕರೆದೊಯ್ಯುವ ‘ದಾರಿ’ಯಾಗಿಯೂ ರೂಪು ಪಡೆದಿವೆ.

‘ಲಕೋಟೆಗಳನ್ನು ಸಾಮಾನ್ಯವಾಗಿ ಎಲ್ಲ ಅವಧಿಯಲ್ಲಿಯೂ ಬಿಡುಗಡೆ ಮಾಡಲು ಸಾಧ್ಯವಿಲ್ಲ. ತುಮಕೂರು ಪೆಕ್ಸ್–2020’ರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಅಂಚೆ ಇಲಾಖೆಯ ಸೂಪರಿಟೆಂಡೆಂಟ್‌ ಕೆ.ವಿ.ಅನಂತರಾಮ್ ತಿಳಿಸಿದರು.

ಅಂಚೆ ಚೀಟಿ ಬಿಡುಗಡೆ ಮಾಡಬೇಕು ಅಂದರೆ ಎರಡು ವರ್ಷಗಳ ಮುಂಚೆಯೇ ಪ್ರಸ್ತಾವ ಸಲ್ಲಿಸಬೇಕು. ಕೇಂದ್ರ ಸಮಿತಿಯಲ್ಲಿ ಅನುಮೋದನೆ ಆಗಬೇಕು. ಆದರೆ ವಿಶೇಷ ಅಂಚೆ ಲಕೋಟೆ ಬಿಡುಗಡೆಗೆ ಇಲಾಖೆಯ ಮುಖ್ಯ ಅಂಚೆ ಅಧೀಕ್ಷಕರಿಂದ ಅನುಮತಿ ಪಡೆಯಬೇಕು’ ಎಂದರು.

ಪ್ರವಾಸಿ ತಾಣದತ್ತ...
ಪಿಚ್ಚರ್ ಪೋಸ್ಟ್ ಕಾರ್ಡ್‌ನ ಒಂದು ಬದಿಯಲ್ಲಿ ಬಾರ್‌ಕೋಡ್ ಸಹ ಇರುತ್ತದೆ. ಅದನ್ನು ಸ್ಕ್ಯಾನ್ ಮಾಡಿದರೆ, ನಾವು ಇರುವ ಸ್ಥಳದಿಂದ ಆ ಪ್ರವಾಸಿ ತಾಣಕ್ಕೆ ಹೇಗೆ ಹೋಗಬೇಕು ಎನ್ನುವ ಮಾಹಿತಿ ದೊರೆಯುತ್ತದೆ ಎಂದು ಜಿಲ್ಲಾ ಅಂಚೆ ಇಲಾಖೆಯ ಸೂಪರಿಟೆಂಡೆಂಟ್‌ ಕೆ.ವಿ.ಅನಂತರಾಮ್ ವಿವರಿಸುವರು.

ಪಿಚ್ಚರ್ ಪೋಸ್ಟ್ ಕಾರ್ಡ್‌ಗೆ ₹ 6ರ ಅಂಚೆ ಚೀಟಿ ಅಂಟಿಸಿದರೆ ಕಾರ್ಡ್ ಅನ್ನು ವಿದೇಶಕ್ಕೂ ಕಳುಹಿಸಬಹುದು. ಹೀಗೆ ಲಕೋಟೆ ಮತ್ತು ಸಚಿತ್ರ ಅಂಚೆ ಕಾರ್ಡ್ ರೂಪಿಸಿರುವುದು ಜಿಲ್ಲೆಯ ಇತಿಹಾಸದಲ್ಲಿ ಪ್ರಮುಖವಾದ ವಿಚಾರ ಎಂದು ಹೇಳಿದರು.

ತುಮಕೂರಿನ ವೆಸ್ಲಿ ಚರ್ಚ್ ಮತ್ತು ಗುಬ್ಬಿ ಚರ್ಚ್‌ಗೆ 150 ವರ್ಷ ಮೀರಿದ ಇತಿಹಾಸ ಇದೆ. ಹೀಗೆ ಐತಿಹಾಸಿ ಮಹತ್ವದ ಸ್ಥಳಗಳು ಇಲ್ಲಿ ಸ್ಥಾನ ಪಡೆದಿವೆ ಎಂದರು.

ಹೆಚ್ಚು ಜನರ ತಲುಪಲು ಹೆಜ್ಜೆ
ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಈ ಹಿಂದೆ ಹೆಚ್ಚಿನ ಮಾಹಿತಿಗಳು ಜನರಿಗೆ ದೊರೆಯುತ್ತಿರಲಿಲ್ಲ. ತಾಣಗಳ ಬಗ್ಗೆ ಮಾಹಿತಿ ಒಳಗೊಂಡ ವಿಡಿಯೊ ಮಾಡಿದೆವು. ಇದಕ್ಕೆ ಇತಿಹಾಸ ಪ್ರಾಧ್ಯಾಪಕರ ನೆರವು ಸಹ ಪಡೆದೆವು. ಈಗ ಲಕೋಟೆ ಮತ್ತು ಪಿಚ್ಚರ್ ಕಾರ್ಡ್ ಮೂಲಕ ಮತ್ತೊಂದು ಹೆಚ್ಚೆ ಇಟ್ಟಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಭಾರ ನಿರ್ದೇಶಕ ಜಾವಿದ್ ಕರಂಗಿ ಮಾಹಿತಿ ನೀಡಿದರು.

ಇದು ಜಿಲ್ಲೆಯ ಪ್ರವಾಸಿ ತಾಣಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತು ಪಡೆಯಲು ಕಾರಣವಾಗುತ್ತವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.