ADVERTISEMENT

ತುಮಕೂರು: ಬೀಗ ಮುರಿದು ಟ್ರಾಕ್ಟರ್ ಮರು ಜಪ್ತಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 15:02 IST
Last Updated 10 ಜನವರಿ 2020, 15:02 IST
ತುಮಕೂರು ಭದ್ರಮ್ಮ ವೃತ್ತದ ಸಮೀಪ ಇರುವ ಪಿಎಲ್‍ಡಿ ಬ್ಯಾಂಕ್‌ನ ಗೋಡೌನ್‌ನಲ್ಲಿದ್ದ ಟ್ರಾಕ್ಟರ್‌ನ್ನು ಮರುಜಪ್ತಿ ಮಾಡಿ ಕೊಂಡೊಯ್ಯುತ್ತಿರುವ ರೈತರು.
ತುಮಕೂರು ಭದ್ರಮ್ಮ ವೃತ್ತದ ಸಮೀಪ ಇರುವ ಪಿಎಲ್‍ಡಿ ಬ್ಯಾಂಕ್‌ನ ಗೋಡೌನ್‌ನಲ್ಲಿದ್ದ ಟ್ರಾಕ್ಟರ್‌ನ್ನು ಮರುಜಪ್ತಿ ಮಾಡಿ ಕೊಂಡೊಯ್ಯುತ್ತಿರುವ ರೈತರು.   

ತುಮಕೂರು: ರೈತನಿಂದ ಟ್ರಾಕ್ಟರ್‌ ಜಪ್ತಿ ಮಾಡಿದ್ದರಿಂದ ಆಕ್ರೋಶಗೊಂಡ ರೈತರು ಶುಕ್ರವಾರ ಬ್ಯಾಂಕ್‌ ಗೋಡೌನ್‌ನ ಬೀಗ ಒಡೆದು ಟ್ರಾಕ್ಟರ್‌ನ್ನು ಮರುಜಪ್ತಿ ಮಾಡಿದರು.

ನಗರದ ಭದ್ರಮ್ಮ ವೃತ್ತದಲ್ಲಿರುವ ಪಿಎಲ್‍ಡಿ ಬ್ಯಾಂಕ್‌ ಶಾಖೆಯಿಂದ ಸಾಲ ಪಡೆದಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ರೈತ ರಘುನಾಥ ಎಂಬುವವರು ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು, ಟ್ರಾಕ್ಟರ್ ಜಪ್ತಿ ಮಾಡಿ ಬ್ಯಾಂಕ್ ಗೋಡೌನ್‍ನಲ್ಲಿ ಇರಿಸಿದ್ದರು.

ರೈತ ಸಂಘ ಮತ್ತು ಹಸಿರುಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್ ನೇತೃತ್ವದಲ್ಲಿ ರೈತರು ಬ್ಯಾಂಕ್‌ಗೆ ಬಂದು ಟ್ರಾಕ್ಟರ್‌ ಇರಿಸಲಾಗಿದ್ದ ಗೋಡೌನ್‍ ಬೀಗ ಹೊಡೆದು ರೈತನಿಂದ ಜಪ್ತಿ ಮಾಡಿದ್ದ ಟ್ರಾಕ್ಟರ್‌ನ್ನು ಮರು ಜಪ್ತಿ ಮಾಡಿ ತೆಗೆದುಕೊಂಡು ಹೋದರು.

ADVERTISEMENT

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮಾತನಾಡಿ, ‘ಸತತ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರವೇ ಬಲವಂತದ ವಸೂಲಿ ಕೈಬಿಟ್ಟು, ರೈತರ ಮನವೊಲಿಸಿ ಸಾಲ ವಸೂಲಿ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೂ ಪಿಎಲ್‍ಡಿ ಬ್ಯಾಂಕಿನವರು ರೈತನಿಗೆ ತಿಳುವಳಿಕೆ ಪತ್ರ ನೀಡದೆ, ಬ್ಯಾಂಕಿನ ಸಾಲ ಎಷ್ಟಿದೆ ಎಂದು ತಿಳಿಸದೆ ರೈತನ ಮನೆಬಾಗಿಲಿಗೆ ಹೋಗಿ ಕಾನೂನು ಬಾಹಿರವಾಗಿ ಟ್ರಾಕ್ಟರ್ ಜಪ್ತಿ ಮಾಡಿದ್ದಾರೆ’ ಎಂದು ಆರೋಪಿಸಿದರು.

ಇದಲ್ಲದೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಖಾಲಿ ಚೆಕ್‍ಗಳಿಗೆ ಸಹಿ ಮಾಡಿ ನೀಡುವಂತೆ ಬೆದರಿಕೆ ಒಡ್ಡುತ್ತಿದ್ದಾರೆ. ಅಧಿಕಾರಿಗಳು ಇಂತಹ ಧೋರಣೆ ಕೂಡಲೇ ಕೈ ಬಿದಿದ್ದರೆ, ರೈತರ ಹೋರಾಟ ತೀವ್ರಗೊಳ್ಳಲಿದೆ. ಅಲ್ಲದೆ, ಬ್ಯಾಂಕ್ ವಸೂಲಾತಿಗೆ ಬಂದಾಗ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಿಹಾಕುತ್ತೇವೆ ಎಂದು ಎಚ್ಚರಿಸಿದರು.

ದೂರು ದಾಖಲು

ರೈತರ ಕ್ರಮ ಖಂಡಿಸಿ ಪಿಎಲ್‌ಡಿ ಬ್ಯಾಂಕ್ ಅಧಿಕಾರಿಗಳು ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.