ADVERTISEMENT

ತುಮಕೂರು: ಸಂಚಾರ ನಿಯಮ ಪಾಲನೆಗೆ ಉದಾಸೀನ; 5 ವರ್ಷದಲ್ಲಿ 9.49 ಲಕ್ಷ ಪ್ರಕರಣ

5 ವರ್ಷದಲ್ಲಿ 9.49 ಲಕ್ಷ ಪ್ರಕರಣ; ₹36.56 ಕೋಟಿ ದಂಡ ವಸೂಲಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:44 IST
Last Updated 3 ಡಿಸೆಂಬರ್ 2025, 6:44 IST
ತುಮಕೂರಿನ ಎಸ್‌.ಎಸ್‌.ವೃತ್ತ
ತುಮಕೂರಿನ ಎಸ್‌.ಎಸ್‌.ವೃತ್ತ    

ತುಮಕೂರು: ನಗರದಲ್ಲಿ ಸಂಚಾರ ನಿಯಮ ಪಾಲನೆಗೆ ಜನ ತಲೆಕೆಡಿಸಿಕೊಳ್ಳುತ್ತಿಲ್ಲ. ಕಳೆದ 5 ವರ್ಷದಲ್ಲಿ ನಿಯಮ ಉಲ್ಲಂಘಿಸಿದ 9.49 ಲಕ್ಷ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ₹36.56 ಕೋಟಿ ದಂಡ ಸಂಗ್ರಹಿಸಲಾಗಿದೆ.

ಸ್ಮಾರ್ಟ್‌ ಸಿಟಿಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಆಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ನಿಯಮ ಉಲ್ಲಂಘಿಸಿದವರನ್ನು ಗುರುತಿಸಲು ಈ ತಂತ್ರಜ್ಞಾನ ಪ್ರಮುಖ ಅಸ್ತ್ರವಾಗಿದೆ. ಸೆನ್ಸಾರ್‌, ಸಿ.ಸಿ ಟಿ.ವಿ ಕ್ಯಾಮೆರಾಗಳು ವಾಹನ ಸವಾರರನ್ನು ಪತ್ತೆ ಹಚ್ಚುತ್ತಿವೆ.

2023ರಲ್ಲಿ 1.63 ಲಕ್ಷ ಪ್ರಕರಣಗಳು ದಾಖಲಾದರೆ, ಅದರ ಮುಂದಿನ ವರ್ಷ 2024ರಲ್ಲಿ 3 ಲಕ್ಷಕ್ಕೆ ಏರಿಕೆಯಾಗಿದೆ. ನಂತರದ ಒಂದೇ ವರ್ಷದಲ್ಲಿ ಸಂಖ್ಯೆ ದುಪ್ಪಟ್ಟಾಗಿದೆ. ಈ ವರ್ಷದ ಆರಂಭದಿಂದ ಸೆಪ್ಟೆಂಬರ್‌ ಅಂತ್ಯಕ್ಕೆ 2.35 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಕೊನೆಯ ಮೂರು ತಿಂಗಳಲ್ಲಿ ಈ ಸಂಖ್ಯೆ 3 ಲಕ್ಷ ದಾಟಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ADVERTISEMENT

ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸ್ಮಾರ್ಟ್‌ ಸಿಗ್ನಲ್‌, ಸಿ.ಸಿ ಟಿ.ವಿ ಕ್ಯಾಮೆರಾ, ಸೆನ್ಸಾರ್‌ ಅಳವಡಿಸಲಾಗಿದೆ. ಜಿಲ್ಲಾ ಪೊಲೀಸ್‌ ಕಚೇರಿ ಆವರಣದಲ್ಲಿ ಆರಂಭಿಸಿರುವ ‘ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್’ ಕಣ್ಗಾವಲಿನಲ್ಲಿ ಕ್ಯಾಮೆರಾ, ಸಿಗ್ನಲ್‌, ಸೆನ್ಸಾರ್‌ ಕಾರ್ಯನಿರ್ವಹಿಸುತ್ತಿವೆ.

312 ಕಡೆಗಳಲ್ಲಿರುವ ಕ್ಯಾಮೆರಾ, ಸೆನ್ಸಾರ್‌ ಸಹಾಯದೊಂದಿಗೆ ನಿಯಮ ಉಲ್ಲಂಘಿಸಿದ ವಾಹನ ಸವಾರರನ್ನು ಪತ್ತೆ ಹಚ್ಚಲಾಗುತ್ತದೆ. ಕೆಲವು ಭಾಗಗಳಲ್ಲಿ ಸಂಚಾರ ಠಾಣೆ ಪೊಲೀಸರು ವಾಹನ ತಡೆದು, ವಿಚಾರಣೆ ನಡೆಸಿ ಅಗತ್ಯ ದಾಖಲೆ ಇಲ್ಲದಿದ್ದರೆ ದಂಡ ವಿಧಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ಕೈಗೆ ಸಿಗದವರು ಸೆನ್ಸಾರ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಸೆನ್ಸಾರ್‌ ಮೂಲಕ ವಾಹನದ ಚಿತ್ರ ತೆಗೆದು, ಅದರಲ್ಲಿ ನಂಬರ್‌ ಪ್ಲೇಟ್‌ ಮುಖಾಂತರ ಮಾಲೀಕರ ಮೊಬೈಲ್‌ ನಂಬರ್‌ ಪತ್ತೆ ಹಚ್ಚಿ ದಂಡ ಪಾವತಿಯ ನೋಟಿಸ್‌ ಕಳುಹಿಸಲಾಗುತ್ತಿದೆ.

ಸಿಬ್ಬಂದಿ ಕೊರತೆ
ನಗರದಲ್ಲಿ ಪೂರ್ವ, ಪಶ್ಚಿಮ ಸಂಚಾರ ಠಾಣೆಗಳಿವೆ. ಎರಡೂ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಹಲವು ವರ್ಷಗಳಿಂದ ಈ ಠಾಣೆಗಳಿಗೆ ಸಿಬ್ಬಂದಿ ನಿಯೋಜಿಸಿಲ್ಲ. ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಒತ್ತಡ ಹೆಚ್ಚಾಗಿದೆ. ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸರ್ಕಾರಕ್ಕೆ ಪ್ರಸ್ತಾವ

ಪೊಲೀಸ್‌ ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸಂಚಾರ ನಿಯಮ ಪಾಲನೆ ಕುರಿತು ಶಾಲಾ–ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ. ದಂಡ ವಸೂಲಿ ಜಾಸ್ತಿಯಾದಂತೆಲ್ಲ ನಿಯಮ ಪಾಲನೆ ಹೆಚ್ಚಾಗುತ್ತಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ.
– ಕೆ.ವಿ.ಅಶೋಕ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.