ADVERTISEMENT

ತುಮಕೂರು: ಆಯುರ್ವೇದ ಆಸ್ಪತ್ರೆಗೆ ಬೇಕಿದೆ ಚಿಕಿತ್ಸೆ!

ಜಿಲ್ಲೆಯಲ್ಲಿ 4 ಆಯುರ್ವೇದ ಆಸ್ಪತ್ರೆ; ಶೇ 66ರಷ್ಟು ಹುದ್ದೆಗಳು ಖಾಲಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 7:31 IST
Last Updated 4 ಆಗಸ್ಟ್ 2025, 7:31 IST
ತುಮಕೂರಿನ ಆಯುಷ್‌ ಇಲಾಖೆ ಕಚೇರಿ
ತುಮಕೂರಿನ ಆಯುಷ್‌ ಇಲಾಖೆ ಕಚೇರಿ   

ತುಮಕೂರು: ಆಯುಷ್‌ ಇಲಾಖೆಯು ವೈದ್ಯರು, ಸಿಬ್ಬಂದಿ, ಅಗತ್ಯ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದು, ಅರ್ಧಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಆಯುರ್ವೇದ ಆಸ್ಪತ್ರೆಗಳಿಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ!

ಜಿಲ್ಲೆಯಲ್ಲಿ 4 ಆಯುರ್ವೇದ ಆಸ್ಪತ್ರೆ, 24 ಆಯುರ್ವೇದ ಚಿಕಿತ್ಸಾಲಯಗಳಿವೆ. ಒಟ್ಟು 113 ಹುದ್ದೆಗಳು ಮಂಜೂರಾಗಿದ್ದು, 75 ಹುದ್ದೆ ಭರ್ತಿಯಾಗಿಲ್ಲ. ಹಲವು ವರ್ಷಗಳಿಂದ ಈ ಸಮಸ್ಯೆ ಕಾಡುತ್ತಿದ್ದು, ತಜ್ಞ ವೈದ್ಯರ ಕೊರತೆ ಮಧ್ಯೆ ಇಲಾಖೆ ಕಾರ್ಯಗಳು ನಡೆಯುತ್ತಿವೆ. 36 ವೈದ್ಯರ ಪೈಕಿ 22 ಮಂದಿ ಕೆಲಸ ಮಾಡುತ್ತಿದ್ದಾರೆ. 14 ಕಡೆಗಳಲ್ಲಿ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಒಬ್ಬರು ಎರಡು ಆಸ್ಪತ್ರೆ, ಚಿಕಿತ್ಸಾಲಯ ನಿರ್ವಹಣೆಯ ಹೊರೆ ಹೊರಬೇಕಿದೆ.

ತುಮಕೂರು, ಮಧುಗಿರಿ, ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಆಯುರ್ವೇದ ಆಸ್ಪತ್ರೆಗಳಿವೆ. ಯಾವುದೇ ಆಸ್ಪತ್ರೆಯಲ್ಲಿ 24X7 ಚಿಕಿತ್ಸೆ ನೀಡಲು ಆಗುತ್ತಿಲ್ಲ. ದಿನ ಪೂರ್ತಿ ಕೆಲಸ ಮಾಡಲು ಬೇಕಾದ ಸಿಬ್ಬಂದಿ ನೇಮಕವಾಗಿಲ್ಲ. ಹೀಗಾಗಿ ಸಂಜೆ 4.30 ಗಂಟೆಗೆ ಆಸ್ಪತ್ರೆಯ ಬಾಗಿಲು ಮುಚ್ಚುತ್ತಿದ್ದಾರೆ. ಸಂಜೆಯ ನಂತರ ಚಿಕಿತ್ಸೆ ಅಗತ್ಯ ಇರುವವರು ಖಾಸಗಿ ಆಸ್ಪತ್ರೆ ಅಥವಾ ಮರು ದಿನದವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಆಯುರ್ವೇದ ಆಸ್ಪತ್ರೆಗೆ ಪ್ರತ್ಯೇಕ ಕಟ್ಟಡವಿಲ್ಲ. ಕಟ್ಟಡ ನಿರ್ಮಿಸಿ, ರೋಗಿಗಳ ಆರೈಕೆಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಈವರೆಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಕನಿಷ್ಠ ಜಾಗ ಗುರುತಿಸುವ ಕಾರ್ಯವೂ ನಡೆದಿಲ್ಲ. ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಿ ಸಂಜೆಯ ನಂತರ ವಾಪಸ್‌ ಕಳುಹಿಸುತ್ತಾರೆ. ಇಲ್ಲಿಯೇ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರಿಸಲು ಬೇಕಾದ ವ್ಯವಸ್ಥೆಯೇ ಇಲ್ಲ. ಮಧುಗಿರಿಯಲ್ಲಿಯೂ ಇದೇ ಪರಿಸ್ಥಿತಿ ಇದೆ. ಈ ಹಿಂದೆ ವೈದ್ಯರೇ ಇರಲಿಲ್ಲ. ಈಗ ಒಬ್ಬರನ್ನು ನಿಯೋಜಿಸಲಾಗಿದೆ.

ಜಿಲ್ಲಾ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗ ವಾಸಿಯಾಗದಿದ್ದರೆ ಕೊನೆಯ ಪ್ರಯತ್ನ ಎಂಬಂತೆ ರೋಗಿಗಳು ಆಯುರ್ವೇದ ಆಸ್ಪತ್ರೆ ಮೊರೆ ಹೋಗುತ್ತಾರೆ. ಇಲ್ಲಿನ ವೈದ್ಯರು ರೋಗ ಪತ್ತೆ ಹಚ್ಚಿ, ಸುಧಾರಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸುತ್ತಾರೆ. ಆಸ್ಪತ್ರೆಗೆ ಹೋದರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಇದೇ ಕಾರಣಕ್ಕೆ ಆಯುರ್ವೇದ ಆಸ್ಪತ್ರೆ ಹುಡುಕಿಕೊಂಡು ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಆದರೆ, ಅವರಿಗೆ ಮಾರ್ಗದರ್ಶನ ನೀಡುವ ವೈದ್ಯರೇ ಸಿಗುತ್ತಿಲ್ಲ.

ಪ್ರತಿ ತಾಲ್ಲೂಕಿನಲ್ಲಿ ಒಂದು ಆಯುರ್ವೇದ ಆಸ್ಪತ್ರೆ ಆರಂಭಿಸಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯ. ಜನಪ್ರತಿನಿಧಿ, ಅಧಿಕಾರಿ ವರ್ಗ ಇತ್ತ ಗಮನ ಹರಿಸಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

ಖಾಲಿ ಹುದ್ದೆ ಭರ್ತಿ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಭರ್ತಿಗೆ ಕ್ರಮ ವಹಿಸಲಾಗುವುದು
ಡಾ.ಸಿ.ಗಂಗಾಧರ್‌ ಜಿಲ್ಲಾ ಆಯುಷ್‌ ಅಧಿಕಾರಿ

ಚಿಕಿತ್ಸಾಲಯ ನಾಮಕಾವಸ್ತೆ:

24 ಆಯುರ್ವೇದ ಚಿಕಿತ್ಸಾಲಯ ಪೈಕಿ 14ರಲ್ಲಿ ವೈದ್ಯರಿಲ್ಲ. 5 ಕಡೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ತಿಪಟೂರಿನ ಮೂರು ಚಿಕಿತ್ಸಾಲಯಗಳಲ್ಲಿ ಕಾಯಂ ವೈದ್ಯರ ನೇಮಕವಾಗಿಲ್ಲ. ಚಿಕಿತ್ಸಾಲಯ ನಾಮಕಾವಸ್ತೆ ಎಂಬಂತೆ ನಡೆಯುತ್ತಿವೆ. ಜನರಿಗೆ ಚಿಕಿತ್ಸೆ ನೀಡುವುದು ಆಯುರ್ವೇದ ಚಿಕಿತ್ಸೆ ಬಗ್ಗೆ ಅರಿವು ಮೂಡಿಸುವುದು ರೋಗ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಿಳಿಸುವುದು ಮನೆ ಮದ್ದಿನ ಬಗ್ಗೆ ಸೂಚಿಸುವುದು ಚಿಕಿತ್ಸಾಲಯದ ಪ್ರಮುಖ ಕಾರ್ಯ. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಆಯುರ್ವೇದ ಚಿಕಿತ್ಸೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಆದರೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸ ನಡೆಯುತ್ತಿಲ್ಲ. ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ಜನರಿಗೆ ಅಗತ್ಯ ಚಿಕಿತ್ಸೆಯೇ ಸಿಗುತ್ತಿಲ್ಲ. ಮೊದಲು ವೈದ್ಯರು ಸಿಬ್ಬಂದಿ ನಿಯೋಜಿಸಲಿ’ ಎಂದು ಬೆಳ್ಳಾವಿಯ ಶಂಕರಮೂರ್ತಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.