ADVERTISEMENT

ಪಾವಗಡ | ಬುಡಕಟ್ಟು ಸಂಸ್ಕೃತಿ ಗೌರವಿಸಿ, ಕಂದಾಚಾರದಿಂದ ಹೊರಬನ್ನಿ: ಸತ್ಯಭಾಮ

ಕಾಡುಗೊಲ್ಲ ಯುವಸೇನೆ ಸಂಘದ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:35 IST
Last Updated 15 ಸೆಪ್ಟೆಂಬರ್ 2025, 6:35 IST
ಪಾವಗಡದಲ್ಲಿ ಭಾನುವಾರ ಕಾಡುಗೊಲ್ಲ ಯುವಸೇನೆ ಸಂಘದಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು
ಪಾವಗಡದಲ್ಲಿ ಭಾನುವಾರ ಕಾಡುಗೊಲ್ಲ ಯುವಸೇನೆ ಸಂಘದಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು   

ಪಾವಗಡ: ಗೊಲ್ಲ ಸಮುದಾಯದ ಜನತೆ ತಮ್ಮ ಬುಡಕಟ್ಟು ಸಂಸ್ಕೃತಿಯನ್ನು ಗೌರವಿಸಬೇಕು. ಆದರೆ ಮೌಢ್ಯ, ಕಂದಾಚಾರ ಆಚರಣೆಗಳಿಂದ ಹೊರಬಂದು ಅಭಿವೃದ್ಧಿಯತ್ತ ಸಾಗಬೇಕು ಎಂದು ಬಿ.ಆರ್.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸತ್ಯಭಾಮ ತಿಳಿಸಿದರು.

ಪಟ್ಟಣದ ಎಸ್‌ಎಸ್‌ಕೆ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕಾಡುಗೊಲ್ಲ ಯುವಸೇನೆ ಸಂಘದ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಧುನಿಕ ಕಾಲದಲ್ಲಿಯೂ ಸಮುದಾಯದ ಜನರು ಹಳೆಯ ಪದ್ಧತಿ, ಆಚರಣೆಗೆ ಜೋತು ಬಿದ್ದು ಹೆಣ್ಣು ಮಕ್ಕಳನ್ನು ಶಾಲಾ, ಕಾಲೇಜಿಗೆ ಕಳುಹಿಸದೆ ಮನೆಕೆಲಸಕ್ಕೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ. ಸಮುದಾಯದ ಜನರಿಗೆ ಶಿಕ್ಷಣವೇ ಶಕ್ತಿ ಎಂಬುದನ್ನು ಅರಿತು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೋಷಕರು ಶ್ರಮಿಸಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಾಗ ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ ಮನ್ನಣೆ ಸಿಗಲಿದೆ ಎಂದರು.

ADVERTISEMENT

ವನಕಲ್ಲು ಪೀಠಾದ್ಯಕ್ಷ ಬಸವ ರಮಾನಂದ ಸ್ವಾಮೀಜಿ ಮಾತನಾಡಿ, ಗೊಲ್ಲ ಸಮುದಾಯದ ಜನತೆ ಶಿಕ್ಷಣ, ಸಂಘಟನೆ, ಹೋರಾಟದ ಅಸ್ತ್ರಗಳ ಮೂಲಕ ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು. ರಾಜ್ಯ ಸೇರಿದಂತೆ ದೇಶದಲ್ಲಿರುವ ಗೊಲ್ಲರಟ್ಟಿಗಳಲ್ಲಿ ಅಭಿವೃದ್ಧಿ ಇಂದಿಗೂ ಮರೀಚಿಕೆಯಾಗಿದೆ. ಸ್ವಾತಂತ್ರ ಬಂದು ದಶಕಗಳು ಕಳೆದರೂ ಇನ್ನೂ ಬಯಲು ಶೌಚವನ್ನು ಜನಾಂಗದವರು ಬಳಸುತ್ತಿದ್ದಾರೆ ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ 80ಕ್ಕಿಂತ ಹೆಚ್ಚಿನ ಅಂಕ ಪಡೆದ 95ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ಕಾಡುಗೊಲ್ಲ ಯುವಸೇನೆ ಸಂಘದ ಅಧ್ಯಕ್ಷ ದಿವ್ಯತೇಜ ಯಾದವ್, ಯಾದವ ಸಂಘದ ಅಧ್ಯಕ್ಷ ನರಸಿಂಹಪ್ಪ, ಶಿವಲಿಂಗಪ್ಪ, ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ, ಮಾಜಿ ಎಂಎಲ್‌ಸಿ ಗುಂಡುಮಲೆ ತಿಪ್ಪೇಸ್ವಾಮಿ, ಬೆಸ್ತರಹಳ್ಳಿ ಕೃಷ್ಣಮೂರ್ತಿ, ದೊಡ್ಡಬಳ್ಳಾಪುರ ಸಿಡಿಪಿಒ ವಿನೋದ್‌ರಾಜ್, ಜಾನಪದ ವಿವಿ ಸಿಂಡಿಕೇಟ್ ಸದಸ್ಯ ಮೋಹನ್, ಸಬ್‌ ಇನ್‌ಸ್ಪೆಕ್ಟರ್‌ ಚಂದ್ರಶೇಖರ್, ಸಣ್ಣನಾಗಪ್ಪ, ನಾಗೇಶ್‌, ನವೀನ್‌, ದೊಡ್ಡಯ್ಯ, ನಾಗರಾಜು ದೇವರಹಟ್ಟಿ, ವಕೀಲ ಚಿತ್ತಗಾನಹಳ್ಳಿ ಚಂದ್ರು, ಕಾಡುಗೊಲ್ಲ ಯುವ ಸೇನೆ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.