ADVERTISEMENT

'ಲೋಕ' ಚುನಾವಣೆ ದೇಶದ ಒಳಿತಿಗೆ, ಹಾಸನ, ಹೊಳೆನರಸೀಪುರಕ್ಕಲ್ಲ:ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 11:08 IST
Last Updated 24 ಮಾರ್ಚ್ 2019, 11:08 IST
   

ತುಮಕೂರು: ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ದೇಶದ ಒಳಿತಿಗಾಗಿಯೇ ಹೊರತು ಹಾಸನ, ಹೊಳೆ ನರಸೀಪುರದ ಹಿತಕ್ಕಲ್ಲ ಎಂದು ಹೇಳುವ ಮೂಲಕ ಬಿಜೆಪಿ ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ರಾಜಕಾರಣವನ್ನು ಟೀಕಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ' ಮಾಜಿ ಪ್ರಧಾನಿ ದೇವೇಗೌಡರೇ ಸ್ಪರ್ಧಿಸಲಿ. ಯಾರೇ ಸ್ಪರ್ಧಿಸಲಿ. ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ, ಅಭಿವೃದ್ಧಿ ಯೋಜನೆಗಳು ಅಭ್ಯರ್ಥಿ ಗೆಲುವಿಗೆ ಅಸರೆಯಾಗಲಿವೆ ಎಂದರು.

ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಒಂದಾಗಿದ್ದಾರೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದೊಂದೇ ನಮ್ಮ ಗುರಿ ಎಂದರು.

ADVERTISEMENT

ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ' ತುಮಕೂರು ಜಿಲ್ಲೆಗೆ ಬೇರೆ ಜಿಲ್ಲೆಯವರು ರಾಜಕಾರಣ ಮಾಡಲು ಬರುತ್ತಿರುವುದು ದುರದೃಷ್ಟಕರ. ದೇವೇಗೌಡರು ಸ್ಪರ್ಧಿಸುವುದು, ಅವರ ಹೆಸರು ನಮಗೆ ಮುಖ್ಯವಲ್ಲ. ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದು ನಮ್ಮ ಅದ್ಯತೆ ಎಂದರು.

ದೇವೇಗೌಡರು ಹಾಸನ, ಮಂಡ್ಯ ಜಿಲ್ಲೆಯಲ್ಲಿ ರಾಜಕಾರಣ ಮಾಡಿ ಗೆದ್ದಿರಬಹುದು. ಆದರೆ, ನಮ್ಮ ಜಿಲ್ಲೆಯ ರಾಜಕಾರಣ ಏನು ಅಂಥಾ ನಮಗೆ ಗೊತ್ತಿದೆ. ನಾವು ಇಲ್ಲಿ ಪಳಗಿದ್ದೇವೆ. ಜನರ ನಾಡಿಮಿಡಿತ ನಮಗೆ ಗೊತ್ತಿದೆ. ಅಷ್ಟು ಸಲೀಸಾಗಿ ಜಿಲ್ಲೆಯ ಜನ ಅವರನ್ನು ಒಪ್ಪಿಕೊಳ್ಳುವುದಿಲ್ಲ. ಹೇಮಾವತಿ ನೀರು ಕೊಡಲು ಒಪ್ಪದವರನ್ಮು ಹೇಗೆ ಈ ಜಿಲ್ಲೆಯ ಜನ ಸ್ವೀಕರಿಸುತ್ತಾರೆ ಎಂದರು.
ದೇವೇಗೌಡರ ಪರೋಕ್ಷ ರಾಜಕಾರಣ ನಮ್ಮ ಜಿಲ್ಲೆಯಲ್ಲಿ ನಡೆಯಲ್ಲ. ಈ ಚುನಾವಣೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಬುದ್ಧಿ ಕಲಿಸಲಿದೆ ಎಂದು ಹೇಳಿದರು.

ಈಗಾಗಲೇ ಸಚಿವ ಎಸ್.ಆರ್. ಶ್ರೀನಿವಾಸ್ ಅವರೇ ದೇವೇಗೌಡರ ಫ್ಯಾಮಿಲಿ ರಾಕ್ಷಸ ಫ್ಯಾಮಿಲಿ ಅಂತಾ ಹೇಳಿದ್ದಾರೆ. ಹೀಗಾಗಿ ದೇವೇಗೌಡರ ರಾಕ್ಷಸ ಗುಣ ಏನು ಎಂಬುದನ್ನು ಜಿಲ್ಲೆಯ ಜನ ಅನುಭವಿಸಿದ್ದಾರೆ ಎಂದು ತಿಳಿಸಿದರು. ಮಾಜಿ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ , ' ಹೇಮಾವತಿ ನೀರಿಗಾಗಿ ಎಷ್ಟು ಗೋಳಾಡಿದ್ದೇವೆ ಎಂಬುದು ನಮಗೆ ಗೊತ್ತು. ನಿಗದಿತ ಪ್ರಮಾಣದ 24 ಟಿಎಂಸಿ ನೀರನ್ನು ತುಮಕೂರು ಜಿಲ್ಲೆಗೆ ಒಂದು ವರ್ಷವೂ ಹರಿಸಿಲ್ಲ ಎಂದರು.

ಬೇಸಿಗೆ ಕಾಲದಲ್ಲಿ ನಮ್ಮ ಬೆಳೆಗೆ ನೀರು ಇರಲ್ಲ. ಕುಡಿಯುವ ನೀರಿಗೂ ಪರದಾಡುತ್ತೇವೆ. ಅದರೆ,ಹಾಸನ ಜಿಲ್ಲೆಯಲ್ಲಿ ಮಾತ್ರ ಕೆರೆ ಕಟ್ಟೆಗಳು ತುಂಬಿರುತ್ತವೆ. ಇದು ದೇವೇಗೌಡರು, ಅವರ ಮಕ್ಕಳು ಜಿಲ್ಲೆಗೆ ಮಾಡಿಕೊಂಡು ಬಂದ ಅನ್ಯಾಯ ಅಲ್ಲವೇ ಎಂದು ಹೇಳಿದರು.

ಈ ಚುನಾವಣೆಯು ಮೈತ್ರಿ ಪಕ್ಷ ಮತ್ತು ಬಿಜೆಪಿ ನಡುವಿಮ ಚುನಾವಣೆ ಎಂದು ನಾವು ಭಾವಿಸಿಲ್ಲ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ನಡುವಿನ ಯುದ್ಧ ಎಂದು ಹೇಳಿದರು.

ಮಂಗಳವಾರ ನಾಮಪತ್ರ ಸಲ್ಲಿಕೆ:ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರು ಮಾ.26 ರಂದು ( ಮಂಗಳವಾರ) ನಾಮಪತ್ರ ಸಲ್ಲಿಸಲಿದ್ದಾರೆ. ಪಕ್ಷದ ಜಿಲ್ಲೆಯ ಎಲ್ಲಾ ಮುಖಂಡರೂ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ಹೇಳಿದರು.

ಶಾಸಕರಾದ ಮಸಾಲಾ ಜಯರಾಂ, ಬಿ.ನಾಗೇಶ್, ಜಿ.ಬಿ.ಜ್ಯೋತಿ ಗಣೇಶ್, ಅಭ್ಯರ್ಥಿ ಜಿ.ಎಸ್. ಬಸವರಾಜ್, ಡಾ.ಎಂ.ಆರ್. ಹುಲಿನಾಯ್ಕರ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.